ಉಗ್ರರ ವಿರುದ್ಧ ಹೋರಾಟದಲ್ಲಿ ಮಡಿದ ಸುಬೇದಾರ್ ಸೋಮ್‌ಬೀರ್‌ಗೆ ಶೌರ್ಯ ಚಕ್ರ

Update: 2020-01-26 04:15 GMT

ಹೊಸದಿಲ್ಲಿ: ಸೇನೆಯ ಆರು ಮಂದಿ ಯೋಧರಿಗೆ ಈ ಬಾರಿಯ ಶಾಂತಿ ಸಮಯದ ಸೇನಾ ಪ್ರಶಸ್ತಿ ಲಭಿಸಿದ್ದು, ಜಮ್ಮು ಕಾಶ್ಮೀರದಲ್ಲಿ 2019ರ ಫೆಬ್ರುವರಿ ತಿಂಗಳಲ್ಲಿ ಉಗ್ರರ ಜತೆಗಿನ ಹೋರಾಟದಲ್ಲಿ ಮಡಿದ ನಯೀಬ್ ಸುಬೇದಾರ್ ಸೋಮ್‌ಬೀರ್ ಇವರಲ್ಲಿ ಸೇರಿದ್ದಾರೆ.

ಕರ್ನಲ್ ಜ್ಯೋತಿ ಲಾಮಾ, ಮೇಜರ್ ಕೊಂಜೇನ್‌ ಬೆಹಮ್ ಬಿಜೇಂದ್ರ ಸಿಂಗ್, ನಯೀಬ್ ಸುಬೇದಾರ್ ನರೇಂದ್ರ ಸಿಂಗ್, ನಾಯ್ಕ ನರೇಶ್ ಕುಮಾರ್ ಮತ್ತು ಕರ್ಮೊಡಿಯೊ ಓರನ್ ಅವರು ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಇತರರು.

ಅದ್ಭುತ ಶೌರ್ಯವನ್ನು ಪ್ರದರ್ಶಿಸುವ ಸಶಸ್ತ್ರ ಪಡೆ ಯೋಧರಿಗೆ ಶೌರ್ಯಚಕ್ರ ನೀಡಲಾಗುತ್ತದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಜೆಟ್‌ಗಳ ನಡುವಿನ ಸಂಘರ್ಷದ ವೇಳೆ ಭಾರತೀಯ ಕ್ಷಿಪಣಿ ಬಡಿದು ಪತನಗೊಂಡ ಹೆಲಿಕಾಪ್ಟರ್‌  ಚಲಾಯಿಸುತ್ತಿದ್ದ ಸ್ಕ್ವಾರ್ಡನ್ ಲೀಡರ್‌ಗಳಾದ ನಿನಾದ್ ಮಂಡವಾಗನ್ ಮತ್ತು ಸಿದ್ಧಾರ್ಥ ವಸಿಷ್ಠ ಸೇರಿದಂತೆ ನಾಲ್ಕು ಮಂದಿ ವಾಯುಸೇನಾ ಪದಕಕ್ಕೆ ಪಾತ್ರರಾಗಿದ್ದಾರೆ.

2019ರ ಫೆಬ್ರುವರಿ 27ರಂದು ಕಾಶ್ಮೀರದ ಬುಡಗಾಂವ್‌ನಲ್ಲಿ ಭಾರತದ ವಾಯು ಪಡೆಯ ಕ್ಷಿಪಣಿ ನಿಯಂತ್ರಣ ಮತ್ತು ಆದೇಶ ವ್ಯವಸ್ಥೆ ವೈಫಲ್ಯದಿಂದ ಹೆಲಿಕಾಪ್ಟರ್‌ಗೆ ಬಡಿದಿತ್ತು. ಭಾರತೀಯ ವಾಯುಪಡೆ ಪಾಕ್ ಪ್ರದೇಶದ ಮೇಲೆ ದಾಳಿ ಮಾಡಿದ ಜೆಇಎಂ ಉಗ್ರರ ಶಿಬಿರಗಳನ್ನು ನಾಶಪಡಿಸಿದ ಮರುದಿನವೇ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನೆ ನಡೆದಿತ್ತು.

ಹವಾಲ್ದಾರ್ ಬಲಜೀತ್, ನಾಯ್ಕ ಸಂದೀಪ್, ನಾಯ್ಕ ಬೂಟಾ ಸಿಂಗ್, ನಾಯ್ಕ ಕುಲದೀಪ್ ಸಿಂಗ್ ಹಾಗೂ ರೈಫಲ್‌ಮನ್ ಅನಿಲ್ ಕುಮಾರ್ ಜೈಶ್ವಾಲ್ ಅವರಿಗೂ ಮರಣೋತ್ತರವಾಗಿ ಸೇನಾ ಪದಕಗಳನ್ನು ಘೋಷಿಸಲಾಗಿದೆ. ಒಟ್ಟು 107 ಮಂದಿಗೆ ಸೇನಾ ಪದಕ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News