ತಳ ಸಮುದಾಯದ ತಲ್ಲಣಗಳ ಅನುರಣಿಸುವ ಕವಿತೆಗಳು

Update: 2020-01-26 06:42 GMT

     ನಾಗೇಶ್ ಜೆ. ನಾಯಕ

‘ಸುರ್ ಕುರ್ಮಾ’ದ ಸಿಹಿ

‘ಗೋಧಿ ಹುಗ್ಗಿ’ಯ ರುಚಿ

ಎರಡರಲ್ಲೂ ‘ಅವನ ಸಹಿ’ ಇದೆ

ಎಂದು ಜಾತಿ-ಧರ್ಮಗಳ ಬಿಟ್ಟು, ಸೌಹಾರ್ದದ ತೋಳ ತೆಕ್ಕೆಯಲ್ಲಿ ಮನುಷ್ಯತ್ವವನ್ನು ಅಪ್ಪುವ ಅಂತಃಕರಣದ ಸಾಲುಗಳನ್ನು ಬರೆಯುವ ಯುವಕವಿ ಮೆಹಬೂಬ್ ಮಠದ ‘ಬಿಸಿಲು ಕಾಡುವ ಪರಿ’ ಎನ್ನುವ ಚೊಚ್ಚಲ ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಲಭಿಸಿದೆ. ಬದುಕಿನ ಕಷ್ಟಗಳ ಕೆಂಡಗಳಲ್ಲಿ ಬೆಂದು ಚಂದದ ಬದುಕನ್ನು ಕಟ್ಟಿಕೊಂಡ ಕಷ್ಟಸಹಿಷ್ಣು ಮೆಹಬೂಬ್‌ರ ಒಡಲಾಳದ ಅನುಭವಗಳು ಒಳಗೊಳಗೆ ಹೆಪ್ಪುಗಟ್ಟಿ ಕವಿತೆಯಾಗಿ ನಮ್ಮ ಮುಂದೆ ಅರಳಿ ನಿಂತಿದೆ. ‘ಮಸೀದಿಯಂಗಳದಲ್ಲಿ ಗಣಪ ಆಡಬೇಕೆಂಬ ಕನಸು ಹೊತ್ತ’ ಇವರ ಕಾವ್ಯದ ಜೀವದ್ರವ್ಯದ ಮೂಲ ಸೌಹಾರ್ದ, ಸಮಾನತೆ, ಶೋಷಣೆ ಮುಕ್ತ ಸಮಾಜದ ಕನಸು. ಈ ಕವಿಯ ಮೊದಲ ಸಂಕಲನ ಇದಾದರೂ ಸಹಜವಾಗಿ ಇರಬೇಕಾದ ಪ್ರೀತಿ-ಪ್ರೇಮದ ಕವಿತೆಗಳ ಸಂಖ್ಯೆ ತೀರಾ ಕಡಿಮೆ. ಅಪನಂಬಿಕೆ, ಸಂಶಯದ ದೃಷ್ಟಿಯಿಂದ ನೋಡುವ ಜನರ ಮನ ಕರಗಿಸಿ, ಕಣ್ಣು ತೆರೆಸುವ ಕವಿತೆಗಳೇ ಹೆಚ್ಚಾಗಿ ಮೂಡಿ ಬಂದಿವೆ. 36 ಕವಿತೆಗಳು ಸಂಕಲನದಲ್ಲಿವೆ. ಚಿಕ್ಕ ಚಿಕ್ಕ ಸಾಲುಗಳಲ್ಲಿ ಹಿರಿದಾದ ಅರ್ಥ ಹೊರಡಿಸುವ ಕವಿತೆಗಳು ಕವಿಯ ಮುಂದಣ ಭರವಸೆಯ ಹೆಜ್ಜೆಗಳನ್ನು ಉತ್ಸಾಹದಿಂದ ದಾಖಲಿಸುತ್ತವೆ.

       ಶ್ರಮ ಸಂಸ್ಕೃತಿಯೊಂದರ ಕೊಡುಗೆಯಾದ ಮೆಹಬೂಬ್ ‘ಮೈಲಿಗೆಯ ಮನಸುಗಳ ತೊಳೆಯುವ ಮಡಿವಾಳನ ಸಾಬೂನು ನನ್ನ ಕವಿತೆ’ ಎಂದು ಗಟ್ಟಿದನಿಯಿಂದ ಹೇಳಿಕೊಳ್ಳಬಲ್ಲರು. ಮೆಹಬೂಬ್ ಮಠದ ಅವರ ‘ಬಿಸಿಲು ಕಾಡುವ ಪರಿ’ ಸಂಕಲನದ ಕವಿತೆಗಳನ್ನು ಓದುವಾಗ ದಲಿತ, ಮುಸ್ಲಿಮ್, ಶೂದ್ರ ಲೋಕದಲ್ಲಿ ನಡೆದ ತಲ್ಲಣ, ತಳಮಳ ಅರ್ಥವಾಗುತ್ತದೆ. ಕವಿಗೆ ಸೌಹಾರ್ದ ಬೇಕಾಗಿದೆ. ಕೂಡಿ ಬಾಳುವ ಕಲೆಯನ್ನು ಅವ ಬಲ್ಲ. ಬಡತನ ಅವನನ್ನು ಬೆಳೆಸಿದೆ. ದುಡಿಯುವ ವರ್ಗದ ಪರ ನಿಲ್ಲುವಂತೆ ಮಾಡಿದೆ. ಕವಿಯ ಅಭಿವ್ಯಕ್ತಿಯಲ್ಲಿ ಹೊಸತಿದೆ. ತನ್ನದೇ ಶೈಲಿಯನ್ನು ಕವಿ ರೂಪಿಸಿಕೊಂಡಿದ್ದಾನೆ ಎಂದು ಮೊದಲ ಮಾತುಗಳನ್ನಾಡಿರುವ ಹಿರಿಯ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರು ಸಶಕ್ತವಾಗಿ ಗುರುತಿಸಿದ್ದಾರೆ. ದೇಶಭಕ್ತಿ ಎಂಬುದು ಕೇವಲ ಒಂದು ಜನಾಂಗದ ಸ್ವತ್ತೇ? ಎಂದು ಪ್ರಶ್ನೆ ಮಾಡುವ ಕವಿ, ಗಾಂಧಿಯನ್ನು ರೂಪಕವಾಗಿಟ್ಟುಕೊಂಡು ಈ ದೇಶದಲ್ಲಿ ಏನೆಲ್ಲಾ ಅನ್ಯಾಯಗಳು ನಡೆದಿವೆ ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸುತ್ತಾರೆ. ನಿನ್ನ ತತ್ವಗಳೆಲ್ಲ ಬಿಕ್ಕುತ್ತಿವೆ ಇಲ್ಲಿ ಬಾಪೂ, ಗರಿಗರಿಯಾದ ಖಾದಿ ತೊಟ್ಟವರು ನೀ ನೂಲುವ ಚರಕಕ್ಕೆ ಅಸಹ್ಯ ಹುಟ್ಟಿಸುತ್ತಿದ್ದಾರೆ. ನಿನ್ನ ರಾಮರಾಜ್ಯದ ಕನಸಿಗೆ ಸೇಡು, ದ್ವೇಷದ ಬೆಂಕಿ ಹೊತ್ತಿಸಲಾಗಿದೆ. ಎಲ್ಲೆಡೆ ಪರ್ಸೆಂಟೇಜಿನ ಪ್ರಾಮಾಣಿಕತೆ ಬಿಕರಿಯಾಗುತ್ತಿದೆ. ಬಿರಿಯಾನಿ-ಬಾಡೂಟ ಪೊಗದಸ್ತಾಗಿ ಉಂಡು ಉಪವಾಸದ ಸೋಗು ಹಾಕಿದ್ದಾರೆ. ನಿನ್ನ ಅಹಿಂಸಾ ಸೌಧ ಎಂದೋ ಬಿರುಕು ಬಿಟ್ಟಿದೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

       ಶಿಥಿಲಗೊಂಡಿವೆ ಗಾಂಧಿ

       ನಿನ್ನ ಅಹಿಂಸೆಯ ಕಂಬಗಳು

       ದುರಸ್ತಿ ಮಾಡುವವರಿಲ್ಲದೇ...

       (ಗಾಂಧಿಗೊಂದಿಷ್ಟು)

ಉಳ್ಳವರ ಗೆಲುವಿಗೆ ಮೆಟ್ಟಿಲಾಗಿ ಬದುಕು ಸವೆಸಿದ್ದು ಸಾಕೆನ್ನುವ ಕವಿ, ಸ್ನೇಹದ ಹೊಸ ಅರ್ಥ ಹುಡುಕುವ ಪ್ರಯತ್ನ ಮಾಡುತ್ತಾನೆ. ಅದೆಷ್ಟು ದಿನ ನಿಮ್ಮ ಹಾದಿಗೆ ಹೂ ಮಳೆಗೆರೆಯುವುದು ಹೇಳಿ? ಇನ್ನಾದರೂ ನಿಮ್ಮ ಒಳಸಂಚುಗಳನ್ನು ಭೇದಿಸಬೇಕು ಎಂಬ ನಿಲುವು ತಾಳುತ್ತಾನೆ. ಒಂದಿಷ್ಟು ಬೆಳಕು ಕೂಡಿಡಬೇಕು ಎನ್ನುತ್ತಲೇ ಕತ್ತಲ ಬದುಕುಗಳಿಗೆ ಆಶಾವಾದಿಯಾಗುತ್ತಾನೆ. ನೊಂದವನಷ್ಟೇ ನೋವಿಗೆ ಇಂಬಾಗಬಲ್ಲ ಎಂಬಂತೆ ಬಿದ್ದವರ ಬದುಕು ಕಟ್ಟುವ, ಅವರ ಕನಸುಗಳಿಗೆ ಬಣ್ಣ ಹುಡುಕುವ ಎಲ್ಲ ಭಾವಗಳು ಒಂದಿಷ್ಟು ಬೆಳಕು ಕವಿತೆಯಲ್ಲಿ ಒಡಮೂಡುತ್ತವೆ.

       ಬೇರೆಯವರ ಹೆಗಲ ಬಂದೂಕಾಗಿದ್ದು ಸಾಕು

       ಸ್ನೇಹದ ಹೊಸ ಅರ್ಥ ಹುಡುಕಬೇಕು

       ಇದ್ದವರ ದನಿಯಾಗಿದ್ದು ಸಾಕು

       ಬಿದ್ದವರ ಊರುಗೋಲಾಗಬೇಕು.

ಹಸಿವೆಂಬ ರಾಕ್ಷಸ ಎಲ್ಲದಕ್ಕೂ ಅಣಿಗೊಳಿಸುತ್ತಾನೆ. ‘ಗೇಣು ಹೊಟ್ಟೆ’ಗಾಗಿಯೇ ನಾನಾ ವೇಷಗಳು, ತರಹೇವಾರಿ ಮುಖವಾಡಗಳು ಬಣ್ಣ ಬದಲಿಸುತ್ತವೆ. ತುತ್ತು ಅನ್ನದ ಯಾಚನೆ ದೈನೇಸಿ ಕಂಗಳ ಕನಸು ಕಸಿಯುತ್ತದೆ. ಸ್ವಾಭಿಮಾನ ಕಣ್ಮರೆಯಾಗಿ ಹಸಿದ ಹೊಟ್ಟೆಗಳ ಕತೆ ಇತಿಹಾಸ ಸೇರುತ್ತದೆ. ನೋವಿನ ನವಿಲಗರಿ ಮರಿ ಹಾಕಿದೆ ಮನದ ಪುಟಗಳಲ್ಲಿ ಎನ್ನುವ ಸಾಲುಗಳ ಮೂಲಕ ಹಸಿವಿನ ದಾಳಿಯನ್ನು ಪ್ರತಿಮೆ, ರೂಪಕಗಳಿಂದ ಸೆರೆಹಿಡಿಯುವ ಕವಿ ಮೆಹಬೂಬ್ ನೋವಿನ ಚಿತ್ರಣ ಬರೆಯುತ್ತಾರೆ.

       ಕನಸುಗಳ ಹೆರಲಾಗದೆ

       ಬಂಜೆಯಾಗಿವೆ ಕಣ್ಣುಗಳು

       ಬತ್ತಿದೆ ಮೆದುಳಿನ ಬಾವಿಯ

       ಆಲೋಚನೆಯ ಸೆಲೆ

       ಬರ್‌ಬಾದಾಗಿದೆ ಸ್ವಾಭಿಮಾನದ ಬಲ

       ಊಟದ ಹಂಗಿಗೆ

ಬಹುತ್ವ ಸಂಸ್ಕೃತಿಯ ಮಾನವೀಯ ಕಾಳಜಿಯನ್ನು ಪ್ರಬಲವಾಗಿ ಪ್ರತಿಬಿಂಬಿಸುವ ಮೆಹಬೂಬ್ ಅವರ ಕವಿತೆಗಳು ಅನುಮಾನದ, ಅಪನಂಬಿಕೆಯ ಹುತ್ತ ಕವಿದ ಮನಸುಗಳಿಗೆ ಪ್ರಶ್ನೆ ಮಾಡುತ್ತಲೇ ತನ್ನ ದೇಶಭಕ್ತಿಯನ್ನು ಸಾಬೀತುಪಡಿಸಲೆತ್ನಿಸುತ್ತವೆ. ನನ್ನದು ಶಿಶುನಾಳ ಶರೀಫನ ಪುಣ್ಯಭೂಮಿ. ತುಪಾಕಿ, ತಲವಾರುಗಳು ಗಾವುದ ಗಾವುದ ದೂರ. ಶಾಂತಿಯ ಬಯಸುವ ಮನಸು ನನ್ನದು. ಮಂದಿರದ ಗಂಟಾನಾದ, ತಾನ್‌ಸೇನನ ಸಂಗೀತದ ಇಂಪು ಎರಡೂ ಇಷ್ಟ ನನಗೆ. ಕಾಮಾಲೆ ಜಗತ್ತಿನ ಕಣ್ಣಿಗೆ ಕಂಡದ್ದೆಲ್ಲ ಹಳದಿಯಾಗಲಾರದು. ನಾನೂ ಭಾರತೀಯನೇ, ಸಹಿಷ್ಣುತೆಯ ಗಾಂಧಿ ನನ್ನ ಆದರ್ಶ ಎಂದು ಹೇಳುವ ಮೂಲಕ ಶಂಕಿಸಬೇಡಿ ನನ್ನ ದೇಶಭಕ್ತಿಯನ್ನು ಎನ್ನುತ್ತಾರೆ.

       ಮುಸ್ಲಿಮ್ ಶಂಕೆಯ ವಸ್ತುವೀಗ

       ಸಾಬೀತುಪಡಿಸಬೇಕಾಗಿದೆ ನಾನು ಮತ್ತು ನನ್ನತನ.

ಮೆಹಬೂಬ್ ‘ತಾಯಿ’ಯ ಕುರಿತು ಬರೆದ ಕವಿತೆ ಕಣ್ಣು ತೇವಗೊಳಿಸುತ್ತದೆ. ತನ್ನ ಬದುಕನ್ನು ಎತ್ತಿ ನಿಲ್ಲಿಸಲು ಏನೆಲ್ಲ ಯಾತನೆ ಅನುಭವಿಸಿದಳು ಅನ್ನುವುದನ್ನು ಆತ ಬರೆದ ಅವ್ವನ ಕವಿತೆಯ ಎರಡೇ ಎರಡು ಸಾಲುಗಳು ಸಾಕ್ಷಿಯಾಗುತ್ತವೆ.

       ನನ್ನ ಬದುಕು ಬೆಲ್ಲ ಮಾಡಲು

       ಅಲ್ಲಾನೊಂದಿಗೆ ಜಗಳಕ್ಕಿಳಿದವಳು

       ಸವಾಲುಗಳ ಬೆಟ್ಟವನು

       ಬೆನ್ನಿಗೆ ಕಟ್ಟಿಕೊಂಡು ಹೋರಾಡಿದವಳು

ಹಾಗೆಂದು ಬರೀ ಅವ್ವನ ಬಗ್ಗೆಯಷ್ಟೇ ಕವಿತೆ ಕಟ್ಟುವುದಿಲ್ಲ, ಅಪ್ಪನ ಕುರಿತಾಗಿಯೂ ಆರ್ದ್ರವಾಗಿ ಆತನ ಆದರ್ಶ, ಕಷ್ಟಸಹಿಷ್ಣುತೆ ಕಟ್ಟಿಕೊಡುತ್ತಾರೆ.

      

       ಅಪ್ಪ ಕಡಿಯುತ್ತಿದ್ದ ಪ್ರತಿ ಇಟ್ಟಿಗೆಯ

       ತುಂಡುಗಳಲ್ಲಿ

       ನಮ್ಮೆಲ್ಲರ ತುತ್ತುಗಳಿದ್ದವು

‘ರಿಪೇರಿಯಾಗದ ಭಾವಗಳು ದುಃಖದ ಗುಜರಿ ಸೇರಿವೆ’, ‘ಪುನರ್ಜನ್ಮದ ರದ್ದತಿ ಕೋರಿ ಅರ್ಜಿ ಸಲ್ಲಿಸಿದೆ ಪ್ರೀತಿ,’ ‘ಅಂದು ಆಟ ಆಡುತ್ತಿದ್ದೆವು ಈಗ ಆಟ ಆಡಿಸುತ್ತಿದೆ ಬದುಕು’ ಹೀಗೆ ಪ್ರತಿ ಕವಿತೆಯಲ್ಲೂ ಅರ್ಥಪೂರ್ಣ ಸಾಲುಗಳನ್ನು ಹುಟ್ಟಿಸುವ ಕವಿ ಮೆಹಬೂಬ್ ಅಂತಃಕರಣ ಕಲಕುತ್ತಾರೆ. ಅನುಭಾವದ ನೆಲೆಯಲ್ಲಿ ಜೀವಗಳನ್ನು ಬೆಸೆಯುತ್ತಾರೆ. ಬಿಸಿಲು ಕಲಿಸುವ ಪಾಠವನ್ನು ಸ್ವತಃ ಅನುಭವಿಸುತ್ತಲೇ ದಾಟಿಸುತ್ತಾರೆ. ಸರಳ, ನಿಖರ ವಸ್ತು, ವಿನ್ಯಾಸಗಳನ್ನು ಇಟ್ಟುಕೊಂಡು ಬರೆಯುವ ಕವಿ ಆಡಂಬರಗಳಿಗೆ ಮಾರು ಹೋಗದೇ ಇರುವುದು ಗಮನಿಸಬೇಕಾದ ಸಂಗತಿ. ಕವಿಗೆ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಭವಿಷ್ಯ ಕಾದಿದೆ ಎಂಬುದು ಅವರ ಮೊದಲ ಕವನ ಸಂಕಲನದಲ್ಲಿಯೇ ಸಾಬೀತಾಗುತ್ತೆ. ಮೆಹಬೂಬ್‌ಗೆ ಅಭಿನಂದನೆಗಳು.

Writer - ನಾಗೇಶ್ ಜೆ. ನಾಯಕ

contributor

Editor - ನಾಗೇಶ್ ಜೆ. ನಾಯಕ

contributor

Similar News