ನೀಲಗಿರಿ ಮುಕ್ತ ಜಿಲ್ಲೆ ಮಾಡಬೇಕೆಂಬುದು ನನ್ನ ಆಶಯ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್

Update: 2020-01-26 18:17 GMT

 ಬೆಂಗಳೂರು, ಜ. 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ನೀಲಗಿರಿ ಮುಕ್ತ ಮಾಡಬೇಕೆಂಬುದು ನನ್ನ ಆಶಯವಾಗಿದೆ ಎಂದು ಬೆಂ.ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಶಾಪವಾಗಿರುವ ನೀಲಗಿರಿ ತೆರವು ಮಾಡಬೇಕೆಂದು ಕೆಡಿಪಿ ಸಭೆಯಲ್ಲಿ ಆದೇಶಿಸಿದ್ದೆ. ಅದರಂತೆ ಜಿಲ್ಲಾಡಳಿತವು 5,763 ಎಕರೆ ಪ್ರದೇಶದಲ್ಲಿನ ನೀಲಗಿರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದೆ ಎಂದರು.

ನೀಲಗಿರಿ ಮರಗಳನ್ನು ತೆರವು ಕಾರ್ಯವನ್ನು ಇನ್ನೂ ಹೆಚ್ಚು ಯಶಸ್ವಿಯಾಗಬೇಕು. ಈ ಜಿಲ್ಲೆ ನೀಲಗಿರಿ ಮುಕ್ತವಾಗಬೇಕು. ಈ ಭಾಗದ ಜನರಿಗೆ ಒಳ್ಳೆಯ ಗಾಳಿ, ನೀರು ಸಿಗಬೇಕು ಎಂಬ ದೃಷ್ಟಿಯಿಂದ ಈ ಕಾರ್ಯ ಯಶಸ್ವಿಗೊಳಿಸಲು ಮುಂದಾಗಿದ್ದೇವೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದರು.

ಅದಾಲತ್: ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಿದ್ದು 22,272 ಅರ್ಜಿ ಸ್ವೀಕರಿಸಲಾಗಿತ್ತು. ಆಪೈಕಿ 21,235 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದ ಅವರು, ಇಲಾಖೆ ಕಾರ್ಯವೈಖರಿಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದರು.

ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಎಸ್ಪಿ ರವಿ.ಡಿ.ಚನ್ನಣ್ಣವರ್, ಜಿ.ಪಂ.ಅಧ್ಯಕ್ಷೆ ಜಯಮ್ಮ ಲಕ್ಷ್ಮಿ ನಾರಾಯಣ, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾ.ಪಂ. ಅಧ್ಯಕ್ಷೆ ಎನ್.ಚೈತ್ರಾ ವೀರೇಗೌಡ, ಉಪಾಧ್ಯಕ್ಷೆ ಲಲಿತಮ್ಮ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News