ಪದ್ಮ ವಿಭೂಷಣ ಪುರಸ್ಕೃತೆ ಮೇರಿಕೋಮ್‌ಗೆ ಭಾರತ ರತ್ನದ ಕನಸು

Update: 2020-01-27 04:14 GMT

ಹೊಸದಿಲ್ಲಿ, ಜ.26: ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮೊದಲ ಮಹಿಳಾ ಕ್ರೀಡಾಪಟು ಆಗಿರುವ ಖ್ಯಾತ ಬಾಕ್ಸರ್ ಎಂಸಿ ಮೇರಿಕೋಮ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸುವ ಮೂಲಕ ಭಾರತ ರತ್ನ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ ಭಾರತ ರತ್ನ ಪ್ರಶಸ್ತಿ ಗೆಲ್ಲುವುದು ನನ್ನ ಕನಸಾಗಿದೆ. ಪದ್ಮ ವಿಭೂಷಣ ಪ್ರಶಸ್ತಿಯು ಇನ್ನಷ್ಟು ಉತ್ತಮ ಸಾಧನೆ ಮಾಡಿದರೆ ಭಾರತ ರತ್ನವನ್ನು ಗೆಲ್ಲಬಹುದೆನ್ನುವುದಕ್ಕೆ ಸ್ಫೂರ್ತಿಯಾಗಿದೆ. ಸಚಿನ್ ತೆಂಡುಲ್ಕರ್ ಈ ಪ್ರಶಸ್ತಿ ಜಯಿಸಿದ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಪ್ರಶಸ್ತಿ ಜಯಿಸಿದ ಎರಡನೇ ಕ್ರೀಡಾಪಟು ಹಾಗೂ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಳ್ಳುವ ವಿಶ್ವಾಸ ನನಗಿದೆ. ನಾನು ತೆಂಡುಲ್ಕರ್‌ರಿಂದ ಸ್ಫೂರ್ತಿ ಪಡೆದಿದ್ದೇನೆ’’ ಎಂದು 2012ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ, ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘‘ನನ್ನ ತಕ್ಷಣದ ಗುರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು. ಆ ಬಳಿಕ ಯಾವ ಬಣ್ಣದ ಪದಕ ಗೆಲ್ಲಬೇಕೆಂದು ಯೋಚಿಸುವೆ. ನಾನು ಒಂದು ವೇಳೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಚಿನ್ನ ಜಯಿಸಿದರೆ ಭಾರತ ರತ್ನ ಗೆಲ್ಲುವ ವಿಶ್ವಾಸ ಹೆಚ್ಚಾಗುತ್ತದೆ. ಭಾರತ ರತ್ನ ಗೆಲ್ಲುವುದು ಮಹಾನ್ ಸಾಧನೆ’’ಎಂದು ಮೇರಿಕೋಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News