ಅಕ್ರಮ ಮನೆ ಸಕ್ರಮ: ರಾಜ್ಯದಲ್ಲಿ 60 ಸಾವಿರ ಅರ್ಹ ಫಲಾನುಭವಿಗಳು- ಸಚಿವ ಆರ್.ಅಶೋಕ್

Update: 2020-01-27 13:11 GMT

ಬೆಂಗಳೂರು, ಜ.27: ಸರಕಾರಿ ಸ್ವಾಮ್ಯದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಪ್ರಕ್ರಿಯೆಯನ್ನು ಕಾನೂನು ರೀತ್ಯಾ ಸಕ್ರಮ ಮಾಡುತ್ತಿದ್ದು, ಇಲ್ಲಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 10 ಸಾವಿರ ಮಂದಿ ಫಲಾನುಭವಿಗಳಿಗೆ ನಾಳೆ (ಜ.28) ಹಕ್ಕು ಪತ್ರ ವಿತರಣೆ ಮಾಡಲಾಗುವುದೆಂದು ಕಂದಾಯ ಸಚಿವ ಆರ್.ಅಶೋಕ್ ಪ್ರಕಟಿಸಿದರು.

ಸೋಮವಾರ ಇಲ್ಲಿನ ಬಸವನಗುಡಿ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ರಮ-ಸಕ್ರಮ ಯೋಜನೆ ಮೂಲಕ ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ಒಂಭತ್ತು ಸಾವಿರ ಮಂದಿ ಸೇರಿದಂತೆ ಒಟ್ಟು, 10 ಸಾವಿರ ಫಲಾನುಭವಿಗಳಿಗೆ ಜ.28ರಂದೇ ಹಕ್ಕು ಪತ್ರ ವಿತರಣೆ ಮಾಡಲಾಗುವುದೆಂದರು.

ಭೂ ಕಂದಾಯ ಕಾಯ್ದೆ 1964ರ ಕಲಂ 94(ಸಿ) ರಡಿ, 2015ಕ್ಕೂ ಮುನ್ನ ಅಕ್ರಮ ಮನೆ ಗಳನ್ನು ಸಕ್ರಮ ಮಾಡಲು 2.5 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಅವುಗಳ ಪರಿಶೀಲನೆ ನಡೆಸಿದ್ದು, ರಾಜ್ಯ ವ್ಯಾಪ್ತಿಯಲ್ಲಿ 60 ಸಾವಿರ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಅದೇ ರೀತಿ, ಗ್ರಾಮೀಣ ಪ್ರದೇಶದಲ್ಲಿ ಗರಿಷ್ಠ 4 ಚದರಡಿಗಳಷ್ಟು ಹಾಗೂ ನಗರ ಪ್ರದೇಶದಲ್ಲಿ 600 ಚದರಡಿ, ಬಿಬಿಎಂಪಿ ಸರಹದ್ದಿನ 18 ಕಿಲೋಮೀಟರ್ ಒಳಗೆ 1200 ಚದರಡಿ ಅನಧಿಕೃತ ಮನೆಗಳನ್ನು ಸಕ್ರಮ ಮಾಡಬಹುದಾಗಿದೆ. ಗ್ರಾಮೀಣ ಪ್ರದೇಶಕ್ಕೆ ಗರಿಷ್ಠ 3 ಸಾವಿರ, ನಗರ ಪ್ರದೇಶಕ್ಕೆ ಗರಿಷ್ಠ 5 ಸಾವಿರ ಶುಲ್ಕ ವಿಧಿಸಲಾಗುತ್ತಿದ್ದು, ಎಸ್ಸಿ-ಎಸ್ಟಿ, ಮಾಜಿ ಸೈನಿಕರು ಹಾಗೂ ವಿಕಲಚೇತನರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಅಶೋಕ್ ವಿವರಿಸಿದರು.

ಮುಖ್ಯಮಂತ್ರಿ ಚಾಲನೆ: ಇಲ್ಲಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಕ್ಕು ಪತ್ರ ವಿತರಣೆ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಚಾಲನೆ ನೀಡಲಿದ್ದಾರೆ. ಅದೇ ರೀತಿ, ವಿವಿಧ ಇಲಾಖೆಯ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಕೃಷಿ ಒಪ್ಪಂದ: ಕೃಷಿ ಉತ್ಪಾದನೆ ಹಾಗೂ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದ ಕೃಷಿಗೆ ಆದ್ಯತೆ ದೊರೆಯುತ್ತಿದ್ದು, ಅದನ್ನು ಕಾನೂನು ಬದ್ಧಗೊಳಿಸಲಾಗುವುದು. ಬೇಸಾಯ ಮಾಡದ ಜಮೀನು ಪಾಳು ಬಿಡುವುದನ್ನು ತಪ್ಪಿಸಲು ಸಾಮೂಹಿಕವಾಗಿ ರೈತರೇ ಮುಂದೆ ಬಂದು ಗುತ್ತಿಗೆ ನೀಡುವುದಾದರೆ ಅದನ್ನು ಕಾನೂನು ಬದ್ಧಗೊಳಿಸಲು ಉದ್ದೇಶಿಸಲಾಗಿದೆ. ಜಮೀನು ಗುತ್ತಿಗೆ ಕೊಡುವವರು ಮತ್ತು ತೆಗೆದುಕೊಳ್ಳುವವರು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ಬೆಂ.ಗ್ರಾ. ಜಿಲ್ಲಾಧಿಕಾರಿ ರವೀಂದ್ರ, ನಗರ ಅಪರ ಜಿಲ್ಲಾಧಿಕಾರಿ ರೂಪಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಜ.31ಕ್ಕೆ ಮಂಗಳೂರಿನಲ್ಲಿ ವಿತರಣೆ

ಜ.31 ರಂದು ಮಂಗಳೂರಿನಲ್ಲಿ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಆನಂತರ ರಾಯಚೂರು, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಹಕ್ಕುಪತ್ರ ಸಮಾರಂಭ ಜರುಗಲಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News