ನಾನು ಮಾತುಗಾರ ಅಲ್ಲ, ಬರೀ ಕೆಲಸಗಾರ: ಸಚಿವ ಪ್ರಭು ಚೌಹಾಣ್

Update: 2020-01-27 13:07 GMT

ಬೆಂಗಳೂರು, ಜ.27: ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳ ನೇಮಕಾತಿ, ಮುಂಭಡ್ತಿ, ವೇತನ ಪರಿಷ್ಕರಣೆ ಸೇರಿದಂತೆ ಯಾವುದೇ ಬೇಡಿಕೆಗಳು ಇರಲಿ, ಕಾನೂನಿನ ಚೌಕಟ್ಟಿನಲ್ಲಿ ಕ್ಷಣಮಾತ್ರದಲ್ಲಿ ಈಡೇರಿಸುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಭರವಸೆ ನೀಡಿದ್ದಾರೆ.

ಸೋಮವಾರ ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಸಹಾಯಕರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಶು ಸಂಗೋಪಣಾ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಆದ್ಯತೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳು ನಮ್ಮ ಕುಟುಂಬದವರಿದ್ದಂತೆ, ನಿಜವಾದ ಗೋವು ರಕ್ಷಕರಾದ ಅವರಿಗೆ ಯಾವುದೇ ಸಮಸ್ಯೆ ಆದರೂ ಅದನ್ನು ಬಗೆಹರಿಸಲು ನಾವು ಸದಾ ಸಿದ್ಧರಿರುತ್ತೇವೆ. ಜನರಿಗೆ ಸೇವೆ ಮಾಡುತ್ತಿರುವ ಅವರಿಗೆ ನಮ್ಮ ಪೋತ್ಸಾಹ ಸದಾ ಇರುತ್ತದೆ. ಇಲಾಖೆಯ ಸಿಬ್ಬಂದಿಗಳು ಯಾವುದೇ ಆತಂಕ ಪಡದೆ ಯಾವುದೇ ಕೆಲಸ ಇದ್ದರೂ ನನ್ನ ಬಳಿ ಬನ್ನಿ. ಕಾನೂನಿನ ಸರಹದ್ದಿನಲ್ಲಿ ನನ್ನಿಂದ ಯಾವುದು ಸಾಧ್ಯವೋ ಎಲ್ಲವನ್ನೂ ಈಡೇರಿಸುತ್ತೇನೆ ಎಂದರು.

ಸಂಘದ ಅಧ್ಯಕ್ಷ ಸಿ.ಎನ್. ಷಡಕ್ಷರಿ ಮಾತನಾಡಿ, ಇಲಾಖೆಯ ಸಿಬ್ಬಂದಿಗಳಿಗೆ ಭಡ್ತಿ, ಪಶುವೈದ್ಯಕೀಯ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಜಾನುವಾರುಗಳಿಂದ ಆಗುವ ದಾಳಿ, ಅಪಘಾತಗಳ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ಭರಿಸಬೇಕು. ಕಲ್ಯಾಣ ನಿಧಿ ಸ್ಥಾಪನೆ ಮತ್ತು ಪಶು ಪಶುವೈದ್ಯರ ರೀತಿ ಇತರ ನೌಕರರ ವರ್ಗದವರೆಗೂ ಶೇ.10ರಷ್ಟು ವಿಶೇಷ ಭತ್ತೆ ನೀಡಬೇಕು. ಪ್ರಸ್ತುತ ವರ್ಷದಲ್ಲಿ ಖಾಲಿ ಇರುವ 898 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಸುವ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಾಗಾರದಲ್ಲಿ ಸಂಸದ ಭಗವಂತ ಖೂಬಾ, ಉಪನ್ಯಾಸಕಿ ಡಾ.ಲೀನಾ ಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ. ದಿನೇಶ್, ಖಜಾಂಚಿ ಪಿ.ಕೇಶವ ಉಪಸ್ಥಿತರಿದ್ದರು.

‘ನಾನು ಮಾತುಗಾರ ಅಲ್ಲ’

ನಾನು ಮಾತುಗಾರ ಅಲ್ಲ. ಗಂಟೆಗಟ್ಟಲೆ ಭಾಷಣ ಬಿಗಿಯುವ ರಾಜಕಾರಣಿಯೂ ಅಲ್ಲ. ನಾನು ಬರೀ ಕೆಲಸಗಾರ ಎಂದು ಪಶು ಸಂಗೋಪಣೆ ಸಚಿವ ಪ್ರಭು ಚೌಹಾಣ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News