ರಾಜ್ಯವನ್ನು ನಂ.1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ಗುರಿ: ಸಚಿವ ಜಗದೀಶ್ ಶೆಟ್ಟರ್

Update: 2020-01-27 15:43 GMT

ಬೆಂಗಳೂರು, ಜ.27: ಕೈಗಾರಿಕಾ ಇಲಾಖೆಗೆ ಸಂಬಂಧಿಸಿದ ವಿಚಾರಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದ್ದು, ರಾಜ್ಯವನ್ನು ದೇಶದಲ್ಲೆ ನಂ.1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಬೇಕು ಎನ್ನುವ ಗುರಿಯನ್ನು ಹೊಂದಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸೋಮವಾರ ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಆಯೋಜಿಸಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಏಳಿಗೆ ಹಾಗೂ ಅಭಿವೃದ್ಧಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೈಗಾರಿಕೋದ್ಯಮಿಗಳೊಂದಿಗೆ ಅವರು ಸಂವಾದ ನಡೆಸಿದರು.

ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರ ನೀಡುತ್ತಿರುವ ಸ್ಪಂದನೆಗೆ ದೇಶದಲ್ಲೆ ಒಳ್ಳೆಯ ಹೆಸರಿದೆ. ಕೆಲವು ಕ್ಷೇತ್ರದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಎಲ್ಲ ವಲಯದ ಕೈಗಾರಿಕೆಗಳಿಗೂ ಅನುಕೂಲ ಮಾಡಿಕೊಡುವ ಪರಿಸರ ನಿರ್ಮಿಸುವ ಮೂಲಕ ದೇಶದಲ್ಲೆ ನಂ.1 ಸ್ಥಾನಕ್ಕೆ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ದಾವೋಸ್ ಭೇಟಿ ಬಹಳ ಫಲಪ್ರದವಾಗಿದೆ. ಮೂರು ದಿನಗಳ ಕಾಲ ದಾವೋಸ್ ನಲ್ಲಿ ನಿರ್ಮಿಸಿದ್ದ ಕರ್ನಾಟಕ ಪೆವಿಲಿಯನ್‌ನಲ್ಲಿ 40 ಪ್ರಮುಖ ಕೈಗಾರಿಕೋದ್ಯಮಿಗಳು, ನಮ್ಮ ತಂಡದ ಜೊತೆಯಲ್ಲಿ ವಿವರವಾಗಿ ಚರ್ಚೆ ನಡೆಸಿ ತಮಗೆ ಬೇಕಾದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.

ಕೈಗಾರಿಕೆ ಸ್ಥಾಪಿಸಲು ಬೇಕಾಗುವ ಭೂಮಿಯನ್ನು ಕೊಂಡುಕೊಳ್ಳಲು ಹಾಗೂ ಭೂ ಪರಿವರ್ತನೆ ಮಾಡಲು ಇರುವ ಕೆಲವು ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆಯಾಗಿರುವ 30 ಕೋಟಿ ರೂ.ಅನುದಾನ ಸಮರ್ಪಕ ಬಳಕೆ ಆಗಬೇಕು. ಅಲ್ಲದೇ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಚಿವ ಸಂಪುಟ ಸಭೆ 50 ಕೋಟಿ ರೂ.ಅನುದಾನ ಮಂಜೂರು ಮಾಡಿದ್ದು, ಇದರ ಸದ್ಬಳಕೆಗೆ ಬೇಕಾಗಿರುವ ಡಿಪಿಆರ್ ಅನ್ನು ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಖಾಸಗಿ ಸಹಭಾಗಿತ್ವದಲ್ಲೊ ಅಥವಾ ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಿರ್ಮಿಸಬೇಕೋ ಎನ್ನುವುದನ್ನು ಚರ್ಚೆ ನಡೆಸುವುದಾಗಿ ತಿಳಿಸಿದ ಅವರು, ನ.3 ರಿಂದ 5ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಇನ್‌ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪೀಣ್ಯ ಇಂಡಸ್ಟ್ರಿಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ, ನಿಕಟಪೂರ್ವ ಅಧ್ಯಕ್ಷ ಗಿರಿ ಎಂ.ಎಂ, ಹಿರಿಯ ಉಪಾಧ್ಯಕ್ಷ ಪ್ರಕಾಶ್ ಸಿ, ಉಪಾಧ್ಯಕ್ಷ ಪ್ರಾಣೇಶ್ ಸಿ, ಗೌರವ ಕಾರ್ಯದರ್ಶಿ ವಿಜಯಕುಮಾರ್ ಎಸ್ ಮಾಕಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News