ಎಟಿಎಂನಿಂದ ನಿಂದ ಹಣ ಕಳವು ಪ್ರಕರಣ: ಇಬ್ಬರ ಬಂಧನ

Update: 2020-01-27 15:54 GMT

ಬೆಂಗಳೂರು, ಜ.27: ಎಟಿಎಂ ಯಂತ್ರ ಒಡೆದು 15 ಲಕ್ಷ ಕಳ್ಳತನ ಮಾಡಿದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹರ್ಷಾ ಆರೊ(40) ಹಾಗೂ ಆತನ ಸ್ನೇಹಿತ ಸುರಬ್ಜಿತ್(41) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 2 ತಿಂಗಳಿಂದ ಬಿಟಿಎಂ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆರೋಪಿಗಳು, ಕೇವಲ ಎರಡು ತಿಂಗಳಲ್ಲಿ ಪರಪ್ಪನ ಅಗ್ರಹಾರದ ಎಟಿಎಂ ಕೇಂದ್ರಕ್ಕೆ ನುಗ್ಗಿ 23 ಲಕ್ಷ ರೂ.ಗಳನ್ನು ಹಣವನ್ನು ಕಳವು ಮಾಡಿದ್ದು, ಸುಬ್ರಮಣ್ಯಪುರದ ಆಕ್ಸಿಸ್ ಹಾಗೂ ಬನಶಂಕರಿಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣ ಕಳವು ಮಾಡಲು ವಿಫಲ ಯತ್ನ ನಡೆಸಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬ್ಯಾಟರಾಯನಪುರದ ದೀಪಾಂಜಲಿ ನಗರದ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಕಳೆದ ಜ.25ರಂದು ಮಧ್ಯರಾತ್ರಿ ನುಗ್ಗಿರುವ ಆರೋಪಿಗಳು ಸಿಸಿಟಿವಿ ಕ್ಯಾಮೆರಾಗೆ ಬ್ಲಾಕ್ ಸ್ಪ್ರೇ ಹೊಡೆದು ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರವನ್ನು ಕತ್ತರಿಸಿ ಅದರಲ್ಲಿದ್ದ 15.4 ಲಕ್ಷ ರೂ. ಹಣವನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಕೃತ್ಯ ಗಮನಿಸಿದ ಮುಂಬೈ ಎಸ್‌ಬಿಐ ಪ್ರಧಾನ ಕಚೇರಿಯ ಸಹಾಯಕ ಕೊಠಡಿ ಸಿಬ್ಬಂದಿ, ಕೂಡಲೇ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಗೆ ಅಲರ್ಟ್ ಮೆಸೇಜ್ ರವಾನಿಸಿದರು. ಅಲ್ಲಿಂದ ಸಂದೇಶ ಬಂದ ತಕ್ಷಣವೇ ಎಚ್ಚೆತ್ತ ಬ್ಯಾಟರಾಯನಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News