‘ಟ್ರಸ್ಟ್’ ಕಾರ್ಯವೈಖರಿ ನಿಯಂತ್ರಣಕ್ಕೆ ಕಾಯ್ದೆ: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

Update: 2020-01-27 16:53 GMT

ಬೆಂಗಳೂರು, ಜ. 27: ಶೈಕ್ಷಣಿಕ ಮತ್ತು ಧಾರ್ಮಿಕ ಕಲ್ಯಾಣಕ್ಕಾಗಿ ಸ್ಥಾಪಿಸಿರುವ ಸಾರ್ವಜನಿಕ ‘ಟ್ರಸ್ಟ್’ಗಳ ಕಾರ್ಯವೈಖರಿ ನಿಯಂತ್ರಣಕ್ಕೆ ‘ಸಾರ್ವಜನಿಕ ಟ್ರಸ್ಟ್ ಕಾಯ್ದೆ’ ಜಾರಿಗೆ ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷದ ಹಿಂದೆ ಹಿಂಪಡೆಯಲಾಗಿದ್ದ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ಕಾಯ್ದೆ ಜಾರಿಗೆ ಉದ್ದೇಶಿಸಿದ್ದು, ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದರು.

ಟ್ರಸ್ಟ್ ಹೆಸರಲ್ಲಿ ಕಾರ್ಯನಿರ್ವಹಿಸುವ ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕ ಕಾಯ್ದುಕೊಳ್ಳಲು ಟ್ರಸ್ಟ್ ಕಾಯ್ದೆ ಮಂಡನೆಗೆ ನಿರ್ಧರಿಸಲಾಗಿದೆ. ಟ್ರಸ್ಟ್ ಹೆಸರಲ್ಲಿ ಅಕ್ರಮ ಜಮೀನು ಮಾರಾಟ ತಡೆಯಲು ಕಾಯ್ದೆ ಸಹಕಾರಿ. ಸೂಕ್ತ ನಿಯಮಾವಳಿಗಳು ಇಲ್ಲದ ಕಾರಣ ಕ್ರಮಗಳು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಕೃಷಿ ಭೂಮಿ ಕೃಷಿಯೇತರ ಉದ್ದೇಶಕ್ಕೆ ಬಳಕೆ ಮಾಡುವ ಸಂಬಂಧದ ಭೂ ಸುಧಾರಣೆ ಕಾಯ್ದೆ ಸೇರಿದಂತೆ ಏಳೆಂಟು ಕಾಯ್ದೆ ಹಾಗೂ ಎರಡು ಸುಗ್ರೀವಾಜ್ಞೆಗಳನ್ನು ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅವರು ವಿವರ ನೀಡಿದರು.

ವಿನಾಯಿತಿ: ಭೂ ಸುಧಾರಣೆ ಕಾಯ್ದೆಯ ಕಲಂ 109ಕ್ಕೆ ತಿದ್ದುಪಡಿ ತರಲು ಸರಕಾರ ನಿರ್ಧರಿಸಿದ್ದು, ಕೃಷಿಯೇತರ ಭೂಮಿ ಮಾರಾಟ ಮಾಡಲು ಇಚ್ಛಿಸುವವರಿಗೆ ವಿನಾಯಿತಿ ನೀಡಲಾಗುವುದು. ಕೈಗಾರಿಕಾ ಉದ್ದೇಶಕ್ಕಾಗಿ ಸರಕಾರದಿಂದ ಭೂಮಿ ಪಡೆದು 7 ವರ್ಷಗಳಾದರೂ ಸದ್ಬಳಕೆ ಮಾಡಲು ಸಾಧ್ಯವಾಗದೆ ಮಾರಾಟ ಮಾಡಲು ಮುಂದಾದರೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಅಧಿವೇಶನ: ಫೆ.17ರಿಂದ ವರ್ಷದ ಮೊದಲ ಅಧಿವೇಶನ ಕರೆಯಲಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮಾ.5ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸಂವಿಧಾನದ ಚರ್ಚೆ: ಸ್ಪೀಕರ್ ಕಾಗೇರಿ ಅವರು ಸಂವಿಧಾನದ ಕುರಿತು ಒಂದು ದಿನ ಚರ್ಚೆ ನಡೆಸಲು ಉದ್ದೇಶಿಸಿದ್ದು, ಉಪಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತು ವಿಶೇಷ ಅಧಿವೇಶನ ಕರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಇದೇ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ ಒಂದು ದಿನದ ಚರ್ಚೆಗೆ, ಸದನ ಕಲಾಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಮೀಸಲಾತಿ: ರಾಷ್ಟ್ರೀಯ ಕಾನೂನು ಶಾಲೆ ಪ್ರವೇಶಕ್ಕೆ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ನೀಡುವ ಸಂಬಂಧ ಮಸೂದೆಯನ್ನು ಮಂಡಿಸಲಾಗುವುದು ಎಂದ ಅವರು, ಕಾಂಗ್ರೆಸ್ ಸರಕಾರ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ಅದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಹೀಗಾಗಿ ಶೇ.25ರಷ್ಟು ಮೀಸಲಾತಿ ಕಲ್ಪಿಸುವಂತೆ ಕೋರಲಾಗುವುದು ಎಂದು ಅವರು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ತನ್ನ ಅಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಯಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದೆ. ಅದೇ ಮಾದರಿಯಲ್ಲಿ ರಾಜ್ಯದ ಶೈಕ್ಷಣಿಕ ಸಂಸ್ಥೆಯಲ್ಲಿಯೂ ಮೀಸಲಾತಿ ನೀಡುವ ಚಿಂತನೆ ಸರಕಾರದ ಮುಂದಿದೆ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News