ಪ್ರಸಕ್ತ ಸಾಲಿನ ಕೊನೆ ಅವಧಿಯ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ: ಮೇಯರ್

Update: 2020-01-27 18:11 GMT

ಬೆಂಗಳೂರು, ಜ.27: ಪ್ರಸಕ್ತ ಸಾಲಿನ ಕೊನೆ ಅವಧಿಯ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಬಜೆಟ್ ಕುರಿತಂತೆ ಈಗಾಗಲೇ ಅಧಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಶ್ರೀನಿವಾಸ್ ಅವರು ಬಜೆಟ್ ಕುರಿತಂತೆ ತಯಾರಿ ಆರಂಭಿಸಿದ್ದಾರೆ. ರಾಜ್ಯ ಸರಕಾರ ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ದಿಗೆ ಮೀಸಲಿಡುವ ಅನುದಾನದ ನಂತರ ನಾವು ಒಂದು ಸಭೆ ನಡೆಸಿ, ನಗರದ ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಲು ಮಾತುಕತೆ ನಡೆಸಲಿದ್ದೇವೆ ಎಂದು ವಿವರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ತಾಂತ್ರಿಕ ದೋಷಗಳಿಂದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಮುಂದೂಡಲಾಗಿದ್ದು ತೋಟಗಾರಿಕಾ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸಲಾಗಿದೆ. ದಾಸರಹಳ್ಳಿ ವಾರ್ಡ್‌ನ ಉಮಾದೇವಿ ನಾಗರಾಜ್ ಅವರು ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಬಾಕಿ ಉಳಿದಿರುವ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆಗೆ ಪ್ರಾದೇಶಿಕ ಆಯುಕ್ತ ಬಸವರಾಜ್ ಅವರು ಮತ್ತೊಂದು ಸುತ್ತಿನಲ್ಲಿ ಚುನಾವಣೆ ನಡೆಸುತ್ತಾರೆ ನಂತರ ಅವರನ್ನು ನಾವೇ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News