ಮರಗಳ ಗಣತಿ ಆರಂಭಿಸದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2020-01-27 18:29 GMT

ಬೆಂಗಳೂರು, ಜ.27: ಬಿಬಿಎಂಪಿ ವ್ಯಾಪ್ತಿಯಲ್ಲಿ ಆದೇಶದ ಗಡುವು ಮುಗಿದಿದ್ದರೂ ಮರಗಳ ಗಣತಿ ಕಾರ್ಯ ಆರಂಭಿಸದ ಬಿಬಿಎಂಪಿ ಹಾಗೂ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಮರ ಗಣತಿ ಬಗ್ಗೆ ತಜ್ಞರ ವಿಶೇಷ ಸಮಿತಿ ರಚಿಸಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಈ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಾದಿಸಿದ ವಕೀಲರು, ಮರ ಗಣತಿ ಮಾಡಲು ಈಗಾಗಲೇ ವೆಬ್‌ಸೈಟ್‌ವೊಂದನ್ನು ರಚಿಸಲಾಗಿದ್ದು, ಈ ವೆಬ್‌ಸೈಟ್‌ನಲ್ಲಿ ಮರಗಳ ಸಂಖ್ಯೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ವೆಬ್‌ಸೈಟ್ ಪ್ರಾರಂಭಿಸಿದ ಮಾತ್ರಕ್ಕೆ ಮರ ಗಣತಿ ಕಾರ್ಯ ಶುರು ಮಾಡಲಾಗಿದೆ ಎಂದರ್ಥವಲ್ಲ. ಮತ್ತೊಂದೆಡೆ ಕೋರ್ಟ್ ಅನುಮತಿ ಇಲ್ಲದೇ ರಾಜ್ಯ ಸರಕಾರವು ಮರ ಗಣತಿ ಮಾಡಲು ತಜ್ಞರ ಸಮಿತಿ ರಚನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಅರ್ಜಿದಾರರ ಪರ ವಾದಿಸಿದ ವಕೀಲರು, ಮರಗಳ ಗಣತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಹಲವು ತಪ್ಪುಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಬೀದಿಗಳಲ್ಲಿನ ಮರಗಳನ್ನು ಮಾತ್ರ ಎಣಿಕೆ ಮಾಡಲಾಗುವುದು. ಖಾಸಗಿ ಜಾಗ ಮತ್ತು ಆಸ್ತಿಗಳಲ್ಲಿನ ಮರಗಳನ್ನು ಗಣತಿಗೆ ಪರಿಗಣಿಸಲಾಗುವುದಿಲ್ಲ ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಇದು ಮರಗಳ ಸಂರಕ್ಷಣಾ ಕಾಯ್ದೆ ಹಾಗೂ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿದೆ. ಮುಖ್ಯವಾಗಿ ಗಡುವು ಮೀರಿ ಮೂರು ತಿಂಗಳಾದರೂ ಈವರೆಗೆ ಮರಗಳ ಗಣತಿ ಆರಂಭವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿಗೆ ಕೋರ್ಟ್ ಆದೇಶ, ಕಾಯ್ದೆ ಏನಿದೆ ಎಂದು ತಿಳಿದುಕೊಳ್ಳದೆ ಸಹಿ ಮಾಡಿದ್ದಾರಾ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಗಣತಿ ಕುರಿತು ನ್ಯಾಯಾಲಯ ಬಹಳ ಸರಳ ರೀತಿಯಲ್ಲಿ ಇದರ ಬಗ್ಗೆ ಆದೇಶ ಬರೆಸಿದೆ. ಹೀಗಿದ್ದಾಗ, ಬಿಬಿಎಂಪಿ ಮತ್ತು ಮರ ವಿಜ್ಞಾನ ಸಂಸ್ಥೆಯ ಒಪ್ಪಂದದಲ್ಲಿ ಕೇವಲ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಮತ್ತು ಬೀದಿಗಳಲ್ಲಿನ ಮರಗಳ ಗಣತಿ ನಡೆಸಲಾಗುವುದು ಎಂಬ ಅಂಶ ಬಂದಿದ್ದಾದರೂ ಹೇಗೆ ಬಿಬಿಎಂಪಿ ಆಯುಕ್ತರು ಮತ್ತು ಮರ ವಿಜ್ಞಾನ ಸಂಸ್ಥೆಯ ಪರ ಸಹಿ ಹಾಕಿರುವ ಅರಣ್ಯ ಸಂರಕ್ಷಣಾಧಿಕಾರಿಗೆ ಕೋರ್ಟ್ ಆದೇಶ, ಕಾಯ್ದೆ ಏನಿದೆ ಎಂದು ತಿಳಿದುಕೊಳ್ಳದೆ ಸಹಿ ಮಾಡಿದ್ದಾರಾ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News