ಪಿಎಫ್‌ಐ-ಎಸ್‌ಡಿಪಿಐ ನಿಷೇಧಕ್ಕೆ ಕೇಂದ್ರಕ್ಕೆ ಮನವಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Update: 2020-01-28 17:05 GMT

ಬೆಂಗಳೂರು, ಜ.28: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರದ ಜನಪ್ರಿಯತೆ ಸಹಿಸದೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ಪಿಎಫ್‌ಐ ಹಾಗೂ ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ. ಸಿಮಿ ಸಂಘಟನೆ ನಿಷೇಧಗೊಂಡ ನಂತರ ಈ ಸಂಘಟನೆಗಳು ಅದೇ ಚಟುವಟಿಕೆಗಳನ್ನು ಮುಂದುವರೆಸಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.

ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಗಲಭೆಗಳಲ್ಲಿ, 23 ಹಿಂದೂ ಕಾರ್ಯಕರ್ತರ ಹತ್ಯೆಗಳ ಹಿಂದೆ ಈ ಸಂಘಟನೆಗಳ ಪಾತ್ರ ಇರುವುದು ದೃಢಪಟ್ಟಿದೆ. ಈ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ ಪತ್ರ ಕಳುಹಿಸುತ್ತಿದ್ದೇವೆ ಎಂದರು.

ಸಿಎಎ ವಿರೋಧಿ ಚಟುವಟಿಕೆಗಳಿಗೆ ವಿದೇಶಗಳಿಂದ 123 ಕೋಟಿ ರೂ., 73 ವ್ಯಕ್ತಿಗಳಿಗೆ ಸಂದಾಯವಾಗಿದೆ. ಇದರಲ್ಲಿ ಅನೇಕರು ಕಾಂಗ್ರೆಸ್‌ನವರಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗುವಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ದೊರೆತದ್ದು ಮುಖಕ್ಕೆ ಹಚ್ಚಿಕೊಳ್ಳುವ ಮಿಣಿ, ಮಿಣಿ ಪೌಡರ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವ ಮೂಲಕ ಪೊಲೀಸರ ನೈತಿಕ ಸ್ಥೈರ್ಯವನ್ನು ಕುಂದಿಸುವ ಪ್ರಯತ್ನ ಮಾಡಿದ್ದಾರೆ. ಪೊಲೀಸ್ ಇಲಾಖೆಯನ್ನು ಗೇಲಿ ಮಾಡಿದ್ದಾರೆ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಎಎ ಪರ ಅಭಿಯಾನದ ಸಹ ಸಂಚಾಲಕಿ ಭಾರತಿ ಮುಗದಮ್, ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News