ಬಾವಿಗೆ ಬಿದ್ದು ಕಾರ್ಮಿಕ ಸಾವು ಪ್ರಕರಣದ ಬಗ್ಗೆ ಜಲಮಂಡಳಿ ಸ್ಪಷ್ಟನೆ

Update: 2020-01-28 17:13 GMT

ಬೆಂಗಳೂರು, ಜ.28: ವಿಲ್ಸನ್ ಗಾರ್ಡನ್‌ನ 10ನೇ ಕ್ರಾಸ್ ವೀಣಾ ಸರ್ವಿಸ್ ಸೆಂಟರ್ ಸಮೀಪವಿದ ಕಸ ಶೇಖರಣೆಯಾಗಿದ್ದ ಬಾವಿ ಸ್ವಚ್ಛಗೊಳಿಸುತ್ತಿದ್ದಾಗ ಓರ್ವ ಕಾರ್ಮಿಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಈ ಘಟನೆಗೂ ಬೆಂಗಳೂರು ಜಲ ಮಂಡಳಿಗೂ ಸಂಬಂಧವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ನಗರದ ವಿಲ್ಸನ್ ಗಾರ್ಡನ್ ವೀಣಾ ಸರ್ವಿಸ್ ಸೆಂಟರ್‌ನ ಸಮೀಪವಿರುವ ಬಾವಿಯಲ್ಲಿ ಕಸ ಶೇಖರಣೆಯಾಗಿ ದುರ್ನಾತ ಬೀರುತ್ತಿತ್ತು. ಹಾಗಾಗಿ ಇಬ್ಬರೂ ಬಾವಿ ಸ್ವಚ್ಛತೆಗೆ ಮುಂದಾಗಿದ್ದ ಇಯಾಜ್ ಕಾಲು ಜಾರಿ ಬಾವಿಗೆ ಬಿದ್ದಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಬಾವಿಯು ಸುಮಾರು 20 ರಿಂದ 25 ಅಡಿ ಆಳದಲ್ಲಿದ್ದು, ಇದನ್ನು ಸ್ವಚ್ಛಗೊಳಿಸುವಾಗ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಈ ಅವಘಡ ಸಂಭವಿಸಿರಬಹುದೆಂದು ಕಂಡು ಬಂದಿರುತ್ತದೆ.

ಬಾವಿಗೆ ಸಂಬಂಧಿಸಿದಂತೆ ಕೊಳಚೆ ನೀರಿನ ಇಳಿಗುಂಡಿಗಳನ್ನು ಸಹ ಪರಿಶೀಲಿಸಿದ್ದು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದು, ಆವರಣದಿಂದ ಸುಮಾರು 40 ರಿಂದ 50 ಅಡಿ ದೂರದ ರಸ್ತೆಯಲ್ಲಿರುವ ಬೆಂಗಳೂರು ಜಲ ಮಂಡಳಿಯ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಒದಗಿಸಿರುವುದು ಕಂಡುಬಂದಿರುತ್ತದೆ ಹಾಗೂ ಬಾವಿಗೆ ಕೊಳಚೆ ನೀರಿನ ಇಳಿಗುಂಡಿಗಳಿಂದ ಯಾವುದೇ ಸಂಪರ್ಕ ಇರುವುದಿಲ್ಲದಿರುವುದನ್ನು ನೀರು ಹರಿಸುವುದರ ಮೂಲಕ ದೃಢಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News