ತೆರಿಗೆ ಜತೆ ಶೇ.2ರಷ್ಟು ಭೂ ಸಾರಿಗೆ ಉಪಕರ ಸಂಗ್ರಹಕ್ಕೆ ಒಪ್ಪಿಗೆ ಸೂಚಿಸಿದ ಬಿಬಿಎಂಪಿ

Update: 2020-01-28 17:15 GMT

ಬೆಂಗಳೂರು, ಜ.28: ನಗರದ ಆಸ್ತಿ ತೆರಿಗೆ ಮಾಲಕರಿಗೆ ಬರೆ ಎಳೆಯಲು ಬಿಬಿಎಂಪಿ ಮುಂದಾಗಿದ್ದು, ಆಸ್ತಿ ತೆರಿಗೆ ಜೊತೆಗೆ ಶೇ.2ರಷ್ಟು ಭೂ ಸಾರಿಗೆ ಉಪಕರ ಸಂಗ್ರಹ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ಮಂಗಳವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ವಿಷಯಾಧಾರಿತ ಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ಶೇ.2ರಷ್ಟು ಭೂ ಸಾರಿಗೆ ಉಪಕರ ಸಂಗ್ರಹ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ಜನತೆ ಮನೆ ನಿರ್ಮಾಣ ಮಾಡಿಕೊಂಡಿರುವುದರಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಆಸ್ತಿ ತೆರಿಗೆ ಜೊತೆಗೆ ರಸ್ತೆಯಲ್ಲಿ ಓಡಾಡುವುದಕ್ಕೂ ಶೇ.2ರಷ್ಟು ಭೂ ಸಾರಿಗೆ ಉಪಕರವನ್ನು ಪಾವತಿಸಬೇಕಿದೆ.

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ಸಭೆಯಲ್ಲಿನ ಇಂತಹ ನಿರ್ಣಯದಿಂದ ಬಿಬಿಎಂಪಿಗೆ ವಾರ್ಷಿಕವಾಗಿ 150 ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ, ಈ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡದೆ ಏಕಾಏಕಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು.

ನಗರದಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಪಾಲಿಕೆ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ಭೂ ಸಾರಿಗೆ ಉಪಕರ ಸಂಗ್ರಹ ಮಾಡಲು ಉದ್ದೇಶಿಸಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ತೆಗೆದುಕೊಳ್ಳಲಾಯಿತು. ನಗರದ ಆಸ್ತಿ ಮಾಲಕರಿಂದ ಸಂಗ್ರಹ ಮಾಡುವ ಭೂ ಸಾರಿಗೆ ಉಪಕರವನ್ನು ಪಾಲಿಕೆಯೇ ಬಳಕೆ ಮಾಡುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಸರಕಾರ ಒಪ್ಪಿಗೆ ನೀಡಿದ್ದಲ್ಲಿ ಭೂ ಸಾರಿಗೆ ಉಪಕರದ ಹಣವನ್ನು ನಗರದ ರಸ್ತೆ ಅಭಿವೃದ್ಧಿಯಂತಹ ಕಾರ್ಯಗಳಿಗೆ ಬಳಕೆ ಮಾಡಲು ಉದ್ದೇಶಿಸಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

1. ಈ ಹಿಂದೆ ಬಿಬಿಎಂಪಿ ವಾರ್ಡ್ 5ರ ವ್ಯಾಪ್ತಿಯ ಬೆಳ್ಳಿಹಳ್ಳಿ ವೃತ್ತಕ್ಕೆ ಬೆಳ್ಳಳ್ಳಿ ಟಿಪ್ಪು ಸುಲ್ತಾನ್ ವೃತ್ತ ಎಂದು ನಾಮಕರಣ ಮಾಡಿರುವ ನಿರ್ಣಯವನ್ನು ರದ್ದು ಪಡಿಸಲು ಅಥವಾ ಕೈ ಬಿಡಲು ಮೇಯರ್ ಕೋರಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ವಿಷಯ ಚರ್ಚೆ ನಡೆಸಿ ಆಯುಕ್ತ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿದೆ.

2. ಕೆಂಗೇರಿ ಉಪನಗರದಿಂದ ಕೊಮ್ಮಟಕ್ಕೆ ಹೋಗುವ ಮುಖ್ಯರಸ್ತೆಗೆ ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರು ನೇಮಕ.

3. ಪದ್ಮನಾಭನಗರ 182ನೆ ವಾರ್ಡ್‌ನಲ್ಲಿರುವ ಕುಮಾರಸ್ವಾಮಿ ಲೇಔಟ್ ಗೋವಿನಾಯಕನಹಳ್ಳಿಯ ಕ್ರೀಡಾಂಗಣಕ್ಕೆ ದೀನದಯಾಳ್ ಉಪಾಧ್ಯಾಯರ ಕ್ರೀಡಾಂಗಣವೆಂದು ನಾಮಕರಣ.

4. ಪದ್ಮನಾಭನಗರ 182 ವಾರ್ಡ್‌ನಲ್ಲಿರುವ ಸಮೃದ್ಧಿ ಲೇಔಟ್‌ನಲ್ಲಿರುವ ಉದ್ಯಾನವನಕ್ಕೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಹೆಸರು ನಾಮಕರಣ. ವಸಂತನಗರ 11ನೇ ಮುಖ್ಯರಸ್ತೆಗೆ ಮುನೇಶ್ವರ ದೇವಸ್ಥಾನದ ರಸ್ತೆ ಎಂದು ನಾಮಕರಣ ತೀರ್ಮಾನಿಸಿದೆ.

5. ವಾರ್ಡ್ 45 ಮಲ್ಲೇಶ್ವರಂನಲ್ಲಿ ನಿರ್ಮಿಸಿರುವ ವಸತಿ ಗೃಹಗಳಿಗೆ ಶ್ರೀ ಸರದಾರ್ ವಲ್ಲಭ ಬಾಯಿ ಪಟೇಲ್ ವಸತಿ ಕುಟೀರಗಳು ಎಂದು ನಾಮಕರಣ.

6. ವಾರ್ಡ್ 66ರ ಸುಬ್ರಮಣ್ಯ ನಗರದ 7ನೇ ಮುಖ್ಯರಸ್ತೆಯಿಂದ ಎ-ಬ್ಲಾಕ್‌ನ ರಸ್ತೆಯವರಿಗೆ ಪದ್ಮಾನಂದ ಗುರೂಜಿ ರಸ್ತೆ ಎಂದು ನಾಮಕರಣ.

7. ದೊಡ್ಡಬೊಮ್ಮಸಂದ್ರ ವಾರ್ಡ್ ನಂ.10ರ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರ ಕೆರೆಯ ಮುಖ್ಯದ್ವಾರದ ಮುಂದೆ ನಾಡಪ್ರಭು ಕೆಂಪೇಗೌಡರವರ ಪ್ರತಿಮೆಯನ್ನು ಸ್ಥಾಪನೆ ಹಾಗೂ ಡಾ. ರಾಜ್‌ ಕುಮಾರ್‌ರವರ ಪ್ರತಿಮೆ ನಿರ್ಮಾಣಕ್ಕೆ ಅನುಮತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News