ಒತ್ತುವರಿ ಭೂಮಿಯಲ್ಲಿ ಬಡವರು, ನಿರ್ಗತಿಕರಿಗೆ ಸೂರು: ಸಿಎಂ ಯಡಿಯೂರಪ್ಪ

Update: 2020-01-28 17:31 GMT

ಬೆಂಗಳೂರು, ಜ.28: ನಗರದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಸರಕಾರ ಸ್ವಾಧೀನಪಡಿಸಿಕೊಂಡು, ಆ ಜಮೀನಿನಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಶ್ರಯ ಮನೆಗಳನ್ನು ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿ ಹಲವು ಕಡೆಗಳಲ್ಲಿ ಅಕ್ರಮ ಭೂಮಿ ಒತ್ತುವರಿಯಾಗಿದೆ. ಈ ಸಂಬಂಧ ಸಮೀಕ್ಷೆ ನಡೆಸುವ ಸಲುವಾಗಿ ಸರಕಾರ ಸಮಿತಿಯನ್ನು ರಚಿಸಿದೆ. ಈ ಸಮಿತಿ ವರದಿ ನೀಡಿದ ನಂತರ ಭೂಮಿ ಒತ್ತುವರಿ ಮಾಡಿಕೊಂಡವರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಒತ್ತುವರಿ ಭೂಮಿಯನ್ನು ಸರಕಾರದ ವಶಕ್ಕೆ ಪಡೆಯಲಾಗುತ್ತದೆ ಎಂದರು.

ನಗರದಲ್ಲಿ ನಿರ್ಗತಿಕರಿಗೆ, ನಿವೇಶನ ರಹಿತರಿಗೆ ಸೂರು ಕಲ್ಪಿಸಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ಸ್ಥಳಾವಕಾಶವಿದೆಯೋ ಅಲ್ಲಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ವಸತಿ ಸಚಿವ ಸೋಮಣ್ಣ ಸಹ ಸ್ಲಂ ರಹಿತ ಪ್ರದೇಶ ಮಾಡಲು ಮುಂದಾಗಿದ್ದು, ಸರಕಾರ ಅವರಿಗೂ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಎಲ್ಲ ಮನೆ ರಹಿತರನ್ನು ಗುರುತಿಸಿ, ಸೂರು ಕಲ್ಪಿಸಿಕೊಡಲು ಸರಕಾರ ಬದ್ಧವಾಗಿದೆ ಎಂದ ಸಿಎಂ, ಇದೀಗ ಹಕ್ಕುಪತ್ರ ಪಡೆಯುತ್ತಿರುವ ಯಾರೊಬ್ಬರೂ ಅಧಿಕಾರಿಗಳಿಗೆ ಒಂದು ರೂ. ಹಣವನ್ನು ನೀಡಬಾರದು. ಯಾರಾದರೂ, ನಿಮ್ಮ ಬಳಿ ಬಂದು ಹಣ ನೀಡುವಂತೆ ಕೇಳಿದರೆ ನಮಗೆ ಮಾಹಿತಿ ತಲುಪಿಸಿ. ಅಂತಹ ಅಧಿಕಾರಿಯನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.

ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಮಾತನಾಡಿ, ಎಲ್ಲೆಲ್ಲಿ ಸರಕಾರಿ ಗೋಮಾಳ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆಯೋ ಎಲ್ಲವನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕೆ ಮಾಜಿ ಸ್ಪೀಕರ್ ಬೋಪಯ್ಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೈಗಾರಿಕೆ ನಡೆಸುವವರಿಗೆ, ವಿದ್ಯಾಸಂಸ್ಥೆ ಕಟ್ಟಲು ಭೂಮಿ ನೀಡುತ್ತೇವೆ. ಆದರೆ, ಅದು ಯಾವ ಉದ್ದೇಶಕ್ಕೆ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸುವಂತೆ ನೀತಿ ಮಾಡಲಾಗುತ್ತಿದೆ. ಇನ್ನು, ವಯಸ್ಸಾದವರಿಗೆ ನೀಡುವ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಸಂಸದರಾದ ಮುನಿಸ್ವಾಮಿ, ಪಿ.ಸಿ.ಮೋಹನ್, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ರಘು, ಬಸವರಾಜು, ಸತೀಶ್‌ರೆಡ್ಡಿ, ಗೋಪಾಲಯ್ಯ, ರವಿಸುಬ್ರಮಣ್ಯ, ಮೇಯರ್ ಗೌತಮ್ ಕುಮಾರ್ ಜೈನ್ ಸೇರಿದಂತೆ ಹಲವರಿದ್ದರು.

ಅಧಿಕಾರಿಗಳಿಂದ ಗ್ರಾಮ ವಾಸ್ತವ್ಯ

ರೈತರ ಭೂಮಿ ಉಳಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಎಸಿ, ತಹಸೀಲ್ದಾರ್‌ಗಳು ತಿಂಗಳಿಗೊಮ್ಮೆ ಗ್ರಾಮ ವಾಸ್ತವ್ಯ ಹೂಡುವ ಯೋಜನೆ ಮಾಡಲಾಗಿದೆ. ಗ್ರಾಮಗಳಿಗೆ ಭೇಟಿ ನೀಡುವ ಅಧಿಕಾರಿಗಳು ಅಲ್ಲಿಯೇ ರೈತರ ಮನೆಯಲ್ಲಿ ಊಟ ಮಾಡಬೇಕು. ಅಲ್ಲದೆ, ಆ ಗ್ರಾಮದ ಸಮಸ್ಯೆಗಳು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು ಎಂಬ ಯೋಜನೆ ಮಾಡಿದ್ದು, 15 ದಿನಗಳೊಳಗೆ ಜಾರಿಗೆ ಬರಲಿದೆ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News