ಪ್ರಜ್ಞಾ ಸಿಂಗ್, ರಿಪಬ್ಲಿಕ್ ಟಿವಿ ಪತ್ರಕರ್ತೆಗೆ ಒಂದು ನಿಯಮ, ಕುನಾಲ್‍ ಗೆ ಇನ್ನೊಂದು !

Update: 2020-01-29 10:36 GMT

ಹೊಸದಿಲ್ಲಿ: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಇಂಡಿಗೋ ಏರ್‍ಲೈನ್ಸ್ ವಿಮಾನದಲ್ಲಿ ಪ್ರಶ್ನೆಗಳನ್ನು ಕೇಳಿದ ವಿಡಿಯೋ ವೈರಲ್ ಆದ ಬಳಿಕ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ವಿರುದ್ಧ ಇಂಡಿಗೋ ಸಹಿತ ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ನಿರ್ಬಂಧ ಹೇರಿದೆ. ಇದೀಗ ವಿಮಾನಯಾನ ಸಂಸ್ಥೆಗಳ ಈ ನಡೆಯ ವಿರುದ್ಧ ಟ್ವಿಟ್ಟರಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಜ್ಞಾ ಸಿಂಗ್, ರಿಪಬ್ಲಿಕ್ ಟಿವಿ ಪತ್ರಕರ್ತೆಗೆ ಒಂದು ನಿಯಮ, ಕುನಾಲ್‍ಗೆ ಇನ್ನೊಂದು ನಿಯಮವೇ ಎಂದು ಹಲವರು ಪ್ರಶ್ನಿಸಲಾರಂಭಿಸಿದ್ದಾರೆ.

ರಿಪಬ್ಲಿಕ್ ಟಿವಿ ಪತ್ರಕರ್ತರೊಬ್ಬರು ಒಮ್ಮೆ ಆರ್‍ ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಇದೇ ರೀತಿ ಸಂದರ್ಶನ ನಡೆಸಿದ್ದನ್ನು ಕೆಲವರು ನೆನಪಿಸಿದ್ದಾರೆ. "ಹಾಗಾದರೆ ಕುನಾಲ್ ಕಾಮ್ರಾ ಅವರು ಅರ್ನಬ್ ಜತೆ ಮಾಡಿದಂತೆ ರಿಪಬ್ಲಿಕ್ ಟಿವಿ ಕೂಡ ಮಾಡಿತ್ತು'' ಎಂದು ಒಬ್ಬರು  ಟ್ವೀಟ್ ಮಾಡಿದ್ದಾರೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕುರ್ ಅವರು  ಕಳೆದ ತಿಂಗಳು ಸೀಟಿನ ವಿಚಾರದಲ್ಲಿ ಪ್ರಯಾಣಿಕರ ಜತೆ ಜಗಳವಾಡಿದ್ದನ್ನು ಕೆಲವರು ನೆನಪಿಸಿಕೊಂಡಿದ್ದಾರೆ.

``ಎರಡು ತಿಂಗಳಾದರೂ ಪ್ರಜ್ಞಾ ಠಾಕುರ್ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಕುನಾಲ್ ಕಾಮ್ರಾ ಅವರ ಮೇಲೆ ನಿರ್ಬಂಧ ವಿಧಿಸಲು ಅವರಿಗೆ ಒಂದು ಇಡೀ ದಿನ ಕೂಡ ಬೇಕಾಗಿಲ್ಲ, ನಾಚಿಕೆಯಿಲ್ಲದ ಹೇಡಿಗಳು'' ಎಂದು ಬುಲ್‍ ಬುಲ್ ಎಂಬ ಟ್ವಿಟರ್ ಹ್ಯಾಂಡಲ್ ಹೊಂದಿದವರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News