ಸಿಎಎ ವಿಚಾರದಲ್ಲಿ ನಿತೀಶ್ ಬಗ್ಗೆ ಅಸಮಾಧಾನ: ಜೆಡಿಯುನಿಂದ ಪ್ರಶಾಂತ್ ಕಿಶೋರ್ ಉಚ್ಛಾಟನೆ

Update: 2020-01-29 14:34 GMT

ಪಾಟ್ನಾ,ಜ.29: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತು ತನ್ನ ನಿಲುವನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ತನ್ನ ಚುನಾವಣಾ ಚಾಣಕ್ಯ ಪ್ರಶಾಂತ ಕಿಶೋರ್ ಮತ್ತು ಬಂಡಾಯ ನಾಯಕ ಪವನ್ ಶರ್ಮಾ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಬುಧವಾರ ಪಕ್ಷವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಜೆಡಿಯುನಿಂದ ಉಚ್ಚಾಟಿಸಿದ್ದಾರೆ.

ಈ ನಾಯಕರಿಬ್ಬರೂ ಪಕ್ಷವನ್ನು ತೊರೆಯಲು ಸ್ವತಂತ್ರರಿದ್ದಾರೆ ಎಂದು ಕುಮಾರ್ ಕೆಲವು ದಿನಗಳ ಹಿಂದೆ ಹೇಳಿದ್ದರು,ಈ ಹಿನ್ನೆಲೆಯಲ್ಲಿ ಬುಧವಾರದ ಅವರಿಬ್ಬರ ಉಚ್ಚಾಟನೆ ಕೇವಲ ಔಪಚಾರಿಕತೆಯಾಗಿದೆ.

ತನ್ನ ಉಚ್ಚಾಟನೆಯ ಬಳಿಕ ಕಿಶೋರ್ ಅವರ ಟ್ವಿಟರ್ ಪೋಸ್ಟ್ ಕುಮಾರ್‌ಗೆ ಸಂದೇಶವೊಂದನ್ನು ರವಾನಿಸಿರುವಂತಿದೆ. ‘ಥ್ಯಾಂಕ್ಯೂ ನಿತೀಶ್ ಕುಮಾರ್, ನೀವು ಬಿಹಾರದ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ನನ್ನ ಶುಭಹಾರೈಕೆಗಳು. ದೇವರು ನಿಮ್ಮನ್ನು ಹರಸಲಿ ’ಎಂದು ಅವರು ಟ್ವೀಟಿಸಿದ್ದಾರೆ.

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತನ್ನ ತಂತ್ರಗಾರಿಕೆಯಿಂದ ಜೆಡಿಯುವನ್ನು ಗೆಲ್ಲಿಸಿದ್ದ ಕಿಶೋರ್ 2018ರಿಂದ ಪಕ್ಷದ ಉಪಾಧ್ಯಕ್ಷರಾಗಿದ್ದರು ಮತ್ತು ಕುಮಾರ್ ಬಳಿಕ ನಂ.2 ಎಂದೇ ಪರಿಗಣಿಸಲ್ಪಟ್ಟಿದ್ದರು. ಆದರೆ ಕಿಶೋರ್ ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ದೃಢವಾದ ನಿಲುವು ತಳೆಯುವಂತೆ ಟ್ವೀಟ್‌ ಗಳ ಮೂಲಕ ಕುಮಾರ್‌ ಗೆ ಬಹಿರಂಗವಾಗಿ ಆಗ್ರಹಿಸುವುದರೊಂದಿಗೆ ಅವರಿಬ್ಬರ ನಡುವಿನ ಸಂಬಂಧ ಹಳಸಿತ್ತು.

ಕಿಶೋರ್ ಪಕ್ಷದಲ್ಲಿ ಉಳಿಯಲಿ ಅಥವಾ ತೊರೆಯಲಿ, ತನಗೇನೂ ಸಮಸ್ಯೆಯಿಲ್ಲ ಎಂದು ಹೇಳುವ ಮೂಲಕ ಕುಮಾರ್ ಮಂಗಳವಾರ ತನ್ನ ಸಿಟ್ಟನ್ನು ಹೊರಹಾಕಿದ್ದರು. ಬಿಜೆಪಿ ನಾಯಕ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಕಿಶೋರ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೆ ಎಂದೂ ಅವರು ಹೇಳಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಟ್ವೀಟಿಸಿದ್ದ ಕಿಶೋರ್, “ಇಂತಹ ಸುಳ್ಳನ್ನು ಹೇಳುವ ಮೂಲಕ ಎಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದೀರಿ! ಇದು ನನ್ನನ್ನು ನಿಮ್ಮಂತೆಯೇ ಎಂದು ಪರಿಗಣಿಸುವ ವಿಫಲ ಯತ್ನ. ಒಂದು ವೇಳೆ ನೀವು ನಿಜವನ್ನೇ ಹೇಳುತ್ತಿದ್ದೀರಿ ಎಂದಿಟ್ಟುಕೊಳ್ಳೋಣ,ಶಾ ಶಿಫಾರಸು ಮಾಡಿದವರ ಮಾತನ್ನು ಕೇಳದಷ್ಟು ಧೈರ್ಯ ನಿಮ್ಮಲ್ಲಿದೆ ಎಂದು ಯಾರಾದರೂ ನಂಬುತ್ತಾರಾ?” ಎಂದು ಕುಟುಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News