ಚುನಾವಣಾ ಬಾಂಡ್ ಗಳ ಬಗ್ಗೆ ಆರ್‌ ಟಿಐ ಅರ್ಜಿಗಳಿಗೆ ಸುಳ್ಳು ಉತ್ತರಗಳನ್ನು ನೀಡಿದ ಎಸ್‌ಬಿಐ

Update: 2020-01-30 14:37 GMT

ಹೊಸದಿಲ್ಲಿ,ಜ.30: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯ ಕುರಿತು ಆರ್‌ಟಿಐ ವಿಚಾರಣೆಗಳಿಗೆ ತನ್ನ ಉತ್ತರಗಳಲ್ಲಿ ತಪ್ಪು ಮಾಹಿತಿಗಳನ್ನು ಒದಗಿಸಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಹಸಿಹಸಿ ಸುಳ್ಳುಗಳನ್ನು ಹೇಳಿದೆ ಎಂದು huffingtonpost.in ಪ್ರಕಟಿಸಿದ ನಿತಿನ್ ಸೇಥಿಯವರ ತನಿಖಾ ವರದಿ ತಿಳಿಸಿದೆ.. ಇದೇ ವೇಳೆ ಎಸ್‌ಬಿಐ ಯೋಜನೆಯ ಕುರಿತು ಮಾಹಿತಿಗಳನ್ನು ಚಾಚೂ ತಪ್ಪದೆ ವಿತ್ತ ಸಚಿವಾಲಯಕ್ಕೆ ಒಪ್ಪಿಸಿದೆ.

ಆರ್‌ಟಿಐ ಕಾರ್ಯಕರ್ತ ವೆಂಕಟೇಶ ನಾಯಕ್ ಅವರು 13 ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕೋರಿ 2019,ಡಿ.4ರಂದು ಸಲ್ಲಿಸಿದ್ದ ಅರ್ಜಿಗೆ ಎಸ್‌ಬಿಐ ನೀಡಿರುವ ಉತ್ತರಗಳು ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಸರಕಾರದಲ್ಲಿಯ ತಮ್ಮ ರಾಜಕೀಯ ಧಣಿಗಳನ್ನು ರಕ್ಷಿಸಲು ಬ್ಯಾಂಕಿನ ಅಧಿಕಾರಿಗಳು ಎಷ್ಟರ ಮಟ್ಟಿಗೆ ಬದ್ಧರಾಗಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಿವೆ. ಈ ಉತ್ತರಗಳು ಬ್ಯಾಂಕಿನ ಡಿಜಿಎಂ ಹಾಗೂ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನರೇಶ ಕುಮಾರ ರಹೇಜಾ ಅವರ ಸಹಿಯನ್ನು ಹೊಂದಿವೆ ಎಂದು ವರದಿ ತಿಳಿಸಿದೆ.

ತನ್ನ ಅಪಾರದರ್ಶಕತೆ ಮತ್ತು ದುರುಪಯೋಗವಾಗುವ ಸಾಧ್ಯತೆಯಿಂದಾಗಿ ಚುನಾವಣಾ ಬಾಂಡ್ ‌ಗಳ ಯೋಜನೆಯು ಟೀಕೆಗಳಿಗೆ ಗುರಿಯಾಗಿರುವುದರಿಂದ ಈ ವಿಷಯವು ಮಹತ್ವವನ್ನು ಪಡೆದುಕೊಂಡಿದೆ. ಯೋಜನೆಯು ಯಾರು ಯಾರಿಗೆ ದೇಣಿಗೆಯನ್ನು ನೀಡುತ್ತಿದ್ದಾರೆ ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳಲು ಸರಕಾರಕ್ಕೆ ಅವಕಾಶ ನೀಡುತ್ತದೆ ಎನ್ನುವ ಟೀಕೆಗೆ ಬಲವಾದ ಆಧಾರಗಳಿವೆ. ಯೋಜನೆಯಡಿ ಅದರ ತಟಸ್ಥ ಅನುಷ್ಠಾನಕಾರರಾಗಿ ಅಸಮಾನ ಹೊಣೆಗಾರಿಕೆಯನ್ನು ಎಸ್‌ಬಿಐನಂತಹ ಸಂಸ್ಥೆಗಳಿಗೆ ವಹಿಸಲಾಗಿದೆ,ಆದರೆ ಎಸ್‌ಬಿಐ ಆರ್‌ಟಿಐ ಉತ್ತರಗಳಲ್ಲಿ ಸುಳ್ಳುಗಳನ್ನು ಹೇಳುವ ಮೂಲಕ ತಾನು ವಿತ್ತ ಸಚಿವಾಲಯದ ಅಪ್ಪಣೆಗಳಿಗೆ ವಿಧೇಯವಾಗಿರಲು ಎಷ್ಟೊಂದು ಆಸಕ್ತವಾಗಿದ್ದೇನೆ ಎನ್ನುವುದನ್ನು ತೋರಿಸಿದೆ ಎಂದು ವರದಿ ಆರೋಪಿಸಿದೆ.

ಚುನಾವಣಾ ಬಾಂಡ್‌ನ್ನು ಖರೀದಿಸುವವರ ಗುರುತು ಬಹಿರಂಗಗೊಳ್ಳುವುದಿಲ್ಲ ಎಂದು ಯೋಜನೆಯ ನಿಯಮವು ಹೇಳುತ್ತದೆ. ಆದರೆ,ಪ್ರತಿ ಚುನಾವಣಾ ಬಾಂಡ್ ಮೇಲಿನ ರಹಸ್ಯ ಸಂಖ್ಯೆಯು ಆದಿಯಿಂದ ಅಂತ್ಯದವರೆಗೆ ಪ್ರತಿ ವಹಿವಾಟಿನ ಜಾಡು ಹಿಡಿಯಲು ಎಸ್‌ಬಿಐಗೆ ಅವಕಾಶ ನೀಡುತ್ತದೆ ಎನ್ನುವುದನ್ನು huffingtonpost.in ಇಂಡಿಯಾ ಕಳೆದ ವರ್ಷದ ನವಂಬರ್ ‌ನಲ್ಲಿ ಬಹಿರಂಗಗೊಳಿಸಿತ್ತು. ಎಸ್‌ಬಿಐ ವಿತ್ತ ಸಚಿವಾಲಯದ ನಿರ್ದೇಶದ ಮೇರೆಗೆ ಅವಧಿ ಮುಗಿದಿದ್ದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದ್ದನ್ನೂ huffingtonpost.in ಇಂಡಿಯಾ ಬೆಳಕಿಗೆ ತಂದಿತ್ತು. ಆರ್‌ ಟಿಐ ಅಡಿ ಮಾಹಿತಿಗಳನ್ನು ಕೋರಿ ಅರ್ಜಿಗಳು ಮೊದಲು ಸಲ್ಲಿಕೆಯಾದಾಗ ಈ ಮಾಹಿತಿಗಳನ್ನು ಅರ್ಜಿದಾರರಿಗೆ ನೀಡಲು ಎಸ್‌ಬಿಐ ವಿತ್ತ ಸಚಿವಾಲಯದಿಂದ ಅನುಮತಿಯನ್ನು ಕೋರಿತ್ತು. ಆರ್‌ಟಿಐ ಕಾನೂನಿನಡಿ ಸ್ವತಂತ್ರ ಸಾರ್ವಜನಿಕ ಪ್ರಾಧಿಕಾರವಾಗಿರುವ ಎಸ್‌ಬಿಐ ಕೇಂದ್ರ ಸರಕಾರದ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ.

   2017,ಫೆಬ್ರುವರಿಯಲ್ಲಿ ಪ್ರಕಟಿಸಲಾಗಿದ್ದ ಯೋಜನೆಯು 2018 ಮಾರ್ಚ್‌ನಲ್ಲಿ ಮೊದಲ ಚುನಾವಣಾ ಬಾಂಡ್‌ಗಳ ಮಾರಾಟದೊಂದಿಗೆ ಜಾರಿಗೊಂಡಿತ್ತು ಮತ್ತು ದೇಣಿಗೆದಾರರು ಈ ಯೋಜನೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ನಾಯಕ್ ತನ್ನ ಆರ್‌ಟಿಐ ಅರ್ಜಿಯಲ್ಲಿನ ಪ್ರಶ್ನೆಗಳನ್ನು ರೂಪಿಸಿದ್ದರು. ಮೊದಲ ಬಾರಿಗೆ ಮಾರಾಟವಾಗಿದ್ದ ಬಾಂಡ್‌ಗಳ ಪೈಕಿ ಶೇ.95ರಷ್ಟು ಬಿಜೆಪಿ ಪಾಲಾಗಿದ್ದವು ಎನ್ನುವುದು ಗಮನಾರ್ಹವಾಗಿದೆ.

 ಮುದ್ರಿತಗೊಂಡ,ಮಾರಾಟವಾದ ಮತ್ತು ಖರೀದಿಯಾದ ಬಾಂಡ್‌ಗಳ ಸಂಖ್ಯೆ,ಈ ಬಾಂಡ್‌ಗಳನ್ನು ರಿಡೀಮ್ ಮಾಡಲಾದ ದಿನಾಂಕವಾರು ದಾಖಲೆ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಾಯಕ್ ಕೇಳಿದ್ದರು. ಚುನಾವಣಾ ಬಾಂಡ್‌ಗಳು ಬೇರರ್ ಬಾಂಡ್‌ ಗಳಾಗಿರುವುದರಿಂದ ಅಕ್ರಮ ಹಣ ವಹಿವಾಟಿಗೆ ಬಳಕೆಯಾಗಬಹುದು ಮತ್ತು ಗಣನೀಯ ಪ್ರಮಾಣದಲ್ಲಿ ವಿತರಿಸಿದರೆ ಭಾರತೀಯ ಕರೆನ್ಸಿಯಲ್ಲಿನ ವಿಶ್ವಾಸವನ್ನು ಕುಂದಿಸಬಹುದು ಎಂದು ಆರ್‌ ಬಿಐ ಕಳವಳಗಳನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ಮಹತ್ವದ್ದಾಗಿವೆ.

2018 ಮತ್ತು 2019ರಲ್ಲಿ ಪ್ರತಿ ಮುಖಬೆಲೆಯ ಎಷ್ಟು ಬಾಂಡ್‌ ಗಳು ಮಾರಾಟವಾಗಿವೆ ಎಂಬ ನಾಯಕ್ ಅವರ ಪ್ರಶ್ನೆಗೆ ಎಸ್‌ಬಿಐ,ಅರ್ಜಿದಾರರು ಕೋರಿರುವ ರೂಪದಲ್ಲಿ ಮಾಹಿತಿ ತನ್ನ ಬಳಿಯಿಲ್ಲ,ಹೀಗಾಗಿ ಈ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿತ್ತು. ಆದರೆ ಇದು ಸುಳ್ಳಾಗಿತ್ತು.

ಎಸ್‌ಬಿಐ ಬಳಿ ಈ ಮಾಹಿತಿಗಳಿರುತ್ತವೆ ಮತ್ತು ಕಾಲಕಾಲಕ್ಕೆ ಅವುಗಳನ್ನು ವಿತ್ತ ಸಚಿವಾಲಯಕ್ಕೆ ಒದಗಿಸುತ್ತದೆ ಮತ್ತು ಈ ಬಾಂಡ್‌ಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ಇನ್ನೋರ್ವ ಆರ್‌ಟಿಐ ಕಾರ್ಯಕರ್ತ ಕಮೊಡೋರ್(ನಿ.) ಲೋಕೇಶ ಬಾತ್ರಾ ಅವರು ಆರ್‌ಟಿಐ ಅರ್ಜಿಯ ಮೂಲಕ ಪಡೆದುಕೊಂಡಿದ್ದ ಉತ್ತರಗಳು ಬಹಿರಂಗಗೊಳಿಸಿದ್ದವು. ಬ್ಯಾಂಕಿನ ಪ್ರತಿಯೊಂದು ಶಾಖೆಯೂ ಮಾರಾಟ ಮಾಡಿರುವ ಬಾಂಡ್‌ಗಳ ದಿನಾಂಕವಾರು ಮಾಹಿತಿಯನ್ನು ನಾಯಕ್ ಕೋರಿದ್ದರು,ಆದರೆ ತಾನು ಶಾಖೆಗಳಿಂದ ಈ ಬಗ್ಗೆ ಮಾಹಿತಿಗಳನ್ನು ಸಂಕಲಿಸಿಲ್ಲ ಎಂದು ಎಸ್‌ಬಿಐ ತಿಳಿಸಿತ್ತು. ಆದರೆ ಇದೂ ಸುಳ್ಳಾಗಿತ್ತು.

ಎಸ್‌ಬಿಐ ಟ್ರಾನ್ಸಾಕ್ಷನ್ ಬಿಸಿನೆಸ್ ಯುನಿಟ್ ಎಂಬ ವಿಶೇಷ ತಂಡವನ್ನು ಹೊಂದಿದ್ದು,ಇದು ಎಲ್ಲ ಶಾಖೆಗಳು ಮಾರಾಟ ಮಾಡಿದ ಬಾಂಡ್‌ಗಳ ಮಾಹಿತಿಗಳ ಕೇಂದ್ರೀಕೃತ ದಾಖಲೆಯನ್ನು ಇಡುತ್ತದೆ ಎನ್ನುವುದು huffingtonpost.in ಗೆ ಲಭಿಸಿರುವ ದಾಖಲೆಗಳು ಬಹಿರಂಗಗೊಳಿಸಿವೆ.

ಇತರ ಪ್ರಶ್ನೆಗಳಿಗೆ ಉತ್ತರಗಳಲ್ಲಿಯೂ ಬ್ಯಾಂಕು ಇಂತಹದೇ ಕುಂಟುನೆಪಗಳನ್ನು ಹೇಳುವ ಮೂಲಕ ನುಣುಚಿಕೊಂಡಿದೆ.

ಆದರೆ ಬಾತ್ರಾ ವಿತ್ತ ಸಚಿವಾಲಯದಿಂದ ಪಡೆದುಕೊಂಡಿರುವ ದಾಖಲೆಗಳು ಎಸ್‌ಬಿಐ ಮುಖಬೆಲೆವಾರು ಬಾಂಡ್‌ಗಳ ಮಾರಾಟ ಸೇರಿದಂತೆ ನಾಯಕ್ ಕೇಳಿದ್ದ ಎಲ್ಲ ಮಾಹಿತಿಗಳನ್ನು ನಿಯಮಿತವಾಗಿ ಸಚಿವಾಲಯಕ್ಕೆ ಸಲ್ಲಿಸುತ್ತದೆ ಎನ್ನುವುದನ್ನು ಬಹಿರಂಗಗೊಳಿಸಿವೆ.

 ಚುನಾವಣಾ ಬಾಂಡ್ ಯೋಜನೆಯ ಪುನರಾವರ್ತಿತ ವೆಚ್ಚಗಳ ಬಗ್ಗೆಯೂ ನಾಯಕ್ ಮಾಹಿತಿ ಕೋರಿದ್ದರು. ಅದರೆ ಆರ್‌ಟಿಐ ಕಾಯ್ದೆಯ ಕಲಂ 8(1)(ಡಿ) ಅಡಿ ವಿನಾಯಿತಿಯ ನೆಪವೊಡ್ಡಿ ಮಾಹಿತಿಯನ್ನು ಬಹಿರಂಗಗೊಳಿಸಲು ಎಸ್‌ಬಿಐ ನಿರಾಕರಿಸಿತ್ತು.

ಚುನಾವಣಾ ಬಾಂಡ್‌ಗಳ ಮಾರಾಟದ ಏಕಸ್ವಾಮ್ಯವನ್ನು ಎಸ್‌ಬಿಐ ಹೊಂದಿದೆ,ಹೀಗಾಗಿ ಅದರ ನಿಲುವು ಅಸಮರ್ಥನೀಯವಾಗಿದೆ. ಬಾಂಡ್‌ಗಳನ್ನು ಸರಕಾರದ ಯೋಜನೆಯನ್ನಾಗಿ ನಡೆಸಲು ಅದನ್ನು ನಿಯೋಜಿಸಲಾಗಿದೆಯೇ ಹೊರತು ಸ್ವತಂತ್ರ ಬ್ಯಾಂಕಿನ ವಾಣಿಜ್ಯಿಕ ಉದ್ಯಮದಂತಲ್ಲ.

   ರಾಜಕೀಯ ಪಕ್ಷಗಳು ಮತ್ತು ದೇಣಿಗೆದಾರರಿಂದ,ರಿಡೀಮ್ ಮಾಡಲಾದ ಅಥವಾ ಸ್ವಾಧೀನವಾದ ಬಾಂಡ್‌ಗಳನ್ನು ನಾಶಗೊಳಿಸುವ ಮುನ್ನ ಎಷ್ಟು ಸಮಯವವರೆಗೆ ಮತ್ತು ಯಾವ ಸ್ಥಳದಲ್ಲಿ ಎಸ್‌ಬಿಐ ಅವುಗಳನ್ನು ಭೌತಿಕವಾಗಿ ಹೊಂದಿರುತ್ತದೆ ಎಂಬ ಪ್ರಶ್ನೆಗೆ ಎಸ್‌ಬಿಐ, ಈ ಮಾಹಿತಿಯನ್ನು ಒದಗಿಸಿದರೆ ಅದು ವ್ಯಕ್ತಿಯ ಖಾಸಗಿತನವನ್ನು ಅನಗತ್ಯ ಉಲ್ಲಂಘನೆಗೆ ಕಾರಣವಾಗುತ್ತದೆ ಎಂಬ ಹಾಸ್ಯಾಸ್ಪದ ಉತ್ತರವನ್ನು ನೀಡಿದೆ ಎಂದು huffingtonpost.in ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News