ನಾಳೆ ನ್ಯೂಝಿಲ್ಯಾಂಡ್ ವಿರುದ್ಧ 4ನೇ ಟ್ವೆಂಟಿ-20

Update: 2020-01-30 18:05 GMT

ವೆಲ್ಲಿಂಗ್ಟನ್, ಜ.30: ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ರೋಚಕ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಜಯಿಸಿರುವ ಟೀಮ್ ಇಂಡಿಯಾ ಶುಕ್ರವಾರ ನಾಲ್ಕನೇ ಪಂದ್ಯವನ್ನು ಆಡಲಿದೆ.

ಸರಣಿಯನ್ನು ಜಯಿಸಿರುವ ಹಿನ್ನೆಲೆಯಲ್ಲಿ ಇನ್ನು ಉಳಿದ ಪಂದ್ಯಗಳಲ್ಲಿ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಆಟಗಾರರಿಗೆ ಅವಕಾಶ ನೀಡಿ ಅವರ ಸಾಮರ್ಥ್ಯವನ್ನು ಪರೀಕ್ಷಿಸುವ ಯೋಜನೆಯಲ್ಲಿದೆ.

ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿದ ಬಳಿಕ ಭಾರತ ಗೆಲುವಿನ ಅಜೇಯ ಓಟವನ್ನು ಮುಂದುವರಿಸಲು ನೋಡುತ್ತಿದ್ದು, ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ನ್ಯೂಝಿಲ್ಯಾಂಡ್‌ನ್ನು ಎದುರಿಸಲು ಯಾವುದೇ ಒತ್ತಡದ ಪರಿಸ್ಥಿತಿ ಇಲ್ಲ. ವೇಗಿ ಮುಹಮ್ಮದ್ ಶಮಿ ಮತ್ತು ರೋಹಿತ್ ಶರ್ಮಾ ಒಟ್ಟಾಗಿ ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ಭಾರತಕ್ಕೆ 3-0 ಮುನ್ನಡೆ ಸಾಧಿಸಲು ನೆರವಾದರು. ಇದರೊಂದಿಗೆ ಭಾರತ ನ್ಯೂಝಿಲ್ಯಾಂಡ್ ನೆಲದಲ್ಲಿ ಚೊಚ್ಚಲ ಟ್ವೆಂಟಿ-20 ಸರಣಿ ಗೆಲುವು ದಾಖಲಿಸಿದೆ. ಉಭಯ ತಂಡಗಳು ಗುರುವಾರ ಹ್ಯಾಮಿಲ್ಟನ್‌ನಿಂದ ವೆಲ್ಲಿಂಗ್ಟನ್‌ಗೆ ಪ್ರಯಾಣ ಬೆಳೆಸಿವೆೆ. ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಅಭ್ಯಾಸ ನಡೆಸಲು ಹೆಚ್ಚು ಸಮಯ ಇಲ್ಲ. ಅಂತಿಮ ಪಂದ್ಯ ರವಿವಾರ ನಡೆಯಲಿದೆ.

       ಐದು ಪಂದ್ಯಗಳ ಟ್ವೆಂಟಿ-20 ಸರಣಿಯು ಅಪರೂಪವಾಗಿದ್ದರೂ, ಭಾರತದ ಆರಂಭಿಕ ಗೆಲುವು ಎಂದರೆ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನ ಸರಣಿಯ ತಯಾರಿಗೆ ಹೊರಟಿರುವ ಭಾರತಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ.

   

 ಭಾರತಕ್ಕೆ ಬಲಿಷ್ಠ ತಂಡವನ್ನು ರೂಪಿಸಲು ಈ ಸರಣಿಯು ಸಹಾಯಕವಾಗಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಇಬ್ಬರೂ ತಂಡದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವೆಂಟಿ-20 ಸರಣಿಯಲ್ಲಿ 5-0 ಅಂತರವನ್ನು ಗೆಲುವು ದಾಖಲಿಸುವ ಅಪರೂಪದ ಅವಕಾಶ ಭಾರತಕ್ಕೆ ಇದೆ. ಬುಧವಾರ ರಾತ್ರಿ ಸೆಡ್ಡಾನ್‌ಪಾರ್ಕ್‌ನಲ್ಲಿ ನಡೆದ ಪಂದ್ಯದ ಬಳಿಕ ಭಾರತ 5 ಪಂದ್ಯಗಳನ್ನು ಗೆದ್ದುಕೊಂಡು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

   ಪೂರ್ಣ ಸಾಮರ್ಥ್ಯದ ಅಂತಿಮ ಹನ್ನೊಂದರ ಬಳಗವನ್ನು ಉಳಿಸಿಕೊಳ್ಳಲು ಭಾರತ ತಂಡಕ್ಕೆ ಹೆಚ್ಚು ಬದಲಾವಣೆ ಮಾಡಬೇಕಾಗಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಕೆಲವು ಸ್ಥಾನಗಳಿಗೆ ಸಾಕಷ್ಟು ಸ್ಪರ್ಧಿಗಳು ಇದ್ದಾರೆ.

         ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಮೊದಲಿಗೆ ಅವರಿಗೆ ತಂಡದಲ್ಲಿ ಅವಕಾಶ ದೊರೆಯುವ ನಿರೀಕ್ಷೆ ಇದೆ. ಪಂತ್ ಅವರನ್ನು ಅಂತಿಮ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳುವುದು ಸ್ಪಷ್ಟಗೊಂಡಿಲ್ಲ. ಯಾಕೆಂದರೆ ಲೋಕೇಶ ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮತ್ತು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುವುದರಲ್ಲೂ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಾಗಿ ಬೇರೆ ವಿಕೆಟ್‌ಕೀಪರ್‌ಗಳಿಗೆ ಇನ್ನು ತಂಡದಲ್ಲಿ ಪೂರ್ಣಾವಧಿ ವಿಕೆಟ್ ಜವಾಬ್ದಾರಿ ಸಿಗುವುದು ಕಷ್ಟ. ಒಂದು ವೇಳೆ ರಾಹುಲ್ ಇನ್ನುಳಿದ ಪಂದ್ಯಗಳಿಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ ಪಂತ್‌ಗೆ ತಂಡದಲ್ಲಿ ಅವಕಾಶ ಸಿಗಬಹುದು.

   ಶ್ರೇಯಸ್ ಅಯ್ಯರ್ ತಂಡದಲ್ಲಿ ಅವಕಾಶ ದೃಢಪಡಿಸುವುದು ಖಚಿತ. ಮನೀಶ್ ಪಾಂಡೆ ಮತ್ತು ಶಿವಮ್ ದುಬೆ ಇಬ್ಬರಿಗೂ ತಂಡದಲ್ಲಿ ಸ್ಥಾನ ಭದ್ರಪಡಿಸಲು ಇನ್ನೂ ಅನೇಕ ಪಂದ್ಯಗಳು ಆಡಬೇಕಾಗುತ್ತದೆ.

  ಮುಂದಿನ ಎರಡು ಪಂದ್ಯಗಳಲ್ಲಿ ಅಗ್ರ ನಾಲ್ಕು ಸ್ಥಾನಗಳ ಆಟಗಾರ ಪೈಕಿ ಯಾರಿಗಾದರೂ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಲ್ಲಿ ಒಬ್ಬರು ಮುಂದಿನ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗದಲ್ಲಿ ಹೆಚ್ಚಿ ನ ಬದಲಾವಣೆಗಳನ್ನು ನಿರೀಕ್ಷಿಸಬೇಕಾಗಿದೆ. ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಮತ್ತು ನವದೀಪ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೂ ಎಲ್ಲರಿಗೂ ಒಂದೇ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಸುಂದರ್ ಆಸ್ಟ್ರೇಲಿಯದ ದೊಡ್ಡ ಮೈದಾನದಲ್ಲಿ ಕೊಹ್ಲಿಯ ಹೊಸ-ಚೆಂಡು ತಂತ್ರದ ಭಾಗವಾಗಿದ್ದಾರೆ. ಆದ್ದರಿಂದ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಅವಕಾಶ ಪಡೆಯುವುದನ್ನು ನಿರೀಕ್ಷಿಸಬಹುದು. ಶಾರ್ದುಲ್ ಠಾಕೂರ್ ಬದಲಿಗೆ ಸೈನಿಗೆ ಅವಕಾಶ ಸಿಗಬಹುದು. ಅಂತಿಮ ಪ್ರಶ್ನೆಯು ಜಸ್‌ಪ್ರೀತ್ ಬುಮ್ರಾ ಅವರ ಸೇರ್ಪಡೆಗೆ ಸಂಬಂಧಿಸಿದ್ದಾಗಿದೆ. ಅವರು ಏಕದಿನ ಮತ್ತು ಟೆಸ್ಟ್ ತಂಡಗಳೆರಡರ ಭಾಗವಾಗಿದ್ದಾರೆ. ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿರುತ್ತಾರೆ . ಅವರು ಗಾಯದ ಸಮಸ್ಯೆ ಎದುರಿಸದಂತೆ ಮುಂದೆ ಎಚ್ಚರವಹಿಸಬೇಕಾಗಿದೆ. 2019ರ ಏಕದಿನ ವಿಶ್ವಕಪ್‌ಗೆ ತಂಡ ಕಟ್ಟುವಾಗ ಎಚ್ಚರ ವಹಿಸಲಾಗಿತ್ತು. ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ವಿಶ್ವಕಪ್ ಬಳಿಕ ಗಾಯದ ಸಮಸ್ಯೆ ಎದುರಿಸಿದ್ದರು. ನ್ಯೂಝಿಲ್ಯಾಂಡ್ ತಂಡದಲ್ಲಿ ಮುಂದಿನ ಎರಡು ಪಂದ್ಯಗಳಿಗೆ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಇನ್ನು ಮುಂದೆ ತಂಡದಲ್ಲಿಲ್ಲ ಅವರು ಬ್ಯಾಟ್ಸ್‌ಮನ್ ಟಾಮ್ ಬ್ರೂಸ್‌ಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕ ಅಷ್ಟೇನೂ ಪರಿಣಾಮಕಾರಿಯಾಗಿ ಇರಲಿಲ್ಲ. ಇದು ಸುಲಭವಾದ ವಿನಿಮಯವಾಗಿದೆ.

     

ಕೇನ್ ವಿಲಿಯಮ್ಸನ್ ಭಡ್ತಿ ಅಗ್ರಕ್ರಮಾಂಕ ದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಹ್ಯಾಮಿಲ್ಟನ್ ಟ್ವೆಂಟಿ-20ಯಲ್ಲಿ ಅವರ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್‌ನ್ನು ಗಮನಿಸಿದರೆ ಅವರು ಮಾರ್ಟಿನ್ ಗಪ್ಟಿಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಕಾಲಿನ್ ಮುನ್ರೊಗೆ ಬ್ಯಾಟಿಂಗ್‌ನಲ್ಲಿ ಹಿಂಭಡ್ತಿ ನಿರೀಕ್ಷಿತ . ಉಳಿದ ಪಂದ್ಯಗಳಿಗೆ ನ್ಯೂಝಿಲ್ಯಾಂಡ್ ತಂಡದ ಬದಲಾವಣೆಯ ಬಗ್ಗೆ ಸ್ಪಷ್ಟ ವಿವರ ಲಭಿಸಿಲ್ಲ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಶಿವಮ್ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಹಮ್ಮದ್ ಶಮಿ ,ಜಸ್‌ಪ್ರೀತ್‌ಬುಮ್ರಾ, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ವಾಶಿಂಗ್ಟನ್ ಸುಂದರ್.

ನ್ಯೂಝಿಲ್ಯಾಂಡ್ ತಂಡ : ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಸ್ಕಾಟ್ ಕುಗ್ಗೆಲೀಜ್ನ್, ಕಾಲಿನ್ ಮುನ್ರೊ, ಕಾಲಿನ್ ಡಿ ಗ್ರಾಂಡ್‌ಹೋಮ್, ಟಾಮ್ ಬ್ರೂಸ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್ ), ಹಾಮೀಶ್ ಬೆನೆಟ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News