ರಾಜಧಾನಿಯ ಖಾಸಗಿ ಶಾಲೆಗಳಿಂದ ನಿಯಮ ಉಲ್ಲಂಘಿಸಿ ದಾಖಲಾತಿ ಆರಂಭ

Update: 2020-01-30 18:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.30: ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಹಲವು ಖಾಸಗಿ ಶಾಲೆಗಳು ಅವಧಿಗೂ ಮೊದಲೇ ದಾಖಲಾತಿ ಆರಂಭಿಸಿರುವುದು ಬೆಳಕಿಗೆ ಬಂದಿದೆ.

ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನೂ ಐದಾರು ತಿಂಗಳುಗಳ ಕಾಲಾವಕಾಶವಿದೆ. ಆದರೆ, ಶೈಕ್ಷಣಿಕ ವರ್ಷ ಆರಂಭಕ್ಕೆ 1-2 ತಿಂಗಳು ಮೊದಲು ಆರಂಭವಾಗಬೇಕಿದ್ದ ಪ್ರಕ್ರಿಯೆಯನ್ನು, 5-6 ತಿಂಗಳ ಮೊದಲೇ ಆರಂಭಿಸಿವೆ. ಈ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ.

ನಗರದ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಯಲ್ಲಿ ಜ.25 ರಿಂದಲೇ ದಾಖಲಾತಿ ಆರಂಭಿಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಅಲ್ಲದೆ, ನಗರದ ಹಲವು ಖಾಸಗಿ ಶಾಲೆಗಳಲ್ಲಿಯೂ ಇಂತಹ ಪ್ರಕ್ರಿಯೆಗೆ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಇಲಾಖೆಯ ನಿಯಮವೇನು: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ಶಾಲಾ ಪ್ರವೇಶ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ನಂತರ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆದು ಜೂನ್ ತಿಂಗಳಿಂದ ಶಾಲೆಗಳು ಅಧಿಕೃತವಾಗಿ ಪ್ರಾರಂಭವಾಗಬೇಕಿರುವುದು ಇಲಾಖೆಯ ನಿಯಮವಾಗಿದೆ.

ತ್ವರಿತ ದಾಖಲಾತಿ ಆರಂಭಕ್ಕೆ ಕಾರಣ: ಪೋಷಕರಿಗೆ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸಬೇಕು ಎಂಬ ಹಂಬಲವಿರುತ್ತದೆ. ಹಲವು ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳೂ ಅತ್ಯುತ್ತಮವಾಗಿರುತ್ತವೆ. ಹಾಗಾಗಿ, ಪೋಷಕರು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಸೇರಿಸಲು ದುಂಬಾಲು ಬೀಳುತ್ತಾರೆ. ಈ ವೇಳೆ ಅಧಿಕ ಮೊತ್ತದ ಡೊನೇಷನ್ ಪಡೆದು ಅವಧಿಗೂ ಮುನ್ನವೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಶಾಲೆಗಳು ಮುಂದಾಗುತ್ತಿವೆ.

ಕೈಕಟ್ಟಿ ಕುಳಿತ ಶಿಕ್ಷಣ ಇಲಾಖೆ

ಖಾಸಗಿ ಶಾಲೆಗಳು ಪ್ರತಿ ವರ್ಷ ನಿಯಮಗಳನ್ನು ಗಾಳಿಗೆ ತೂರಿ ಪ್ರವೇಶ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರೂ ಸಂಬಂಧಪಟ್ಟ ಶಾಲೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಕಟ್ಟಿ ಕುಳಿತಿದೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಐಸಿಎಸ್ಸಿ ಮತ್ತು ಸಿಬಿಎಸ್ಸಿ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದ್ದು, ರಾಜ್ಯ ಸರಕಾರ ಇವುಗಳ ಮಾನ್ಯತೆಯನ್ನು ರದ್ದು ಮಾಡಲು ಸಾಧ್ಯವಿಲ್ಲ. ತಪ್ಪಿತಸ್ಥ ಶಾಲೆಗಳ ವಿರುದ್ಧ ಕೆಲವೊಮ್ಮೆ ಕೇವಲ ಸಣ್ಣ ಮೊತ್ತದ ದಂಡ ವಿಧಿಸಿ, ಶಿಕ್ಷಣ ಇಲಾಖೆ ಕೈ ತೊಳೆದುಕೊಳ್ಳುತ್ತಿದೆಯೇ ಹೊರತು, ಇಂತಹ ಶಾಲೆಗಳನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂಬ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News