×
Ad

ಫಾರ್ಮಾಸಿಸ್ಟ್‌ಗಳ ವೇತನ ಹೆಚ್ಚಳವಾಗಬೇಕಿದೆ: ಫಾರ್ಮಸಿಸ್ಟ್‌ಗಳ ಸಂಘದ ಅಧ್ಯಕ್ಷ ಬಿ.ಎಸ್.ದೇಸಾಯಿ

Update: 2020-01-31 00:17 IST

ಬೆಂಗಳೂರು, ಜ.30: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಫಾರ್ಮಾಸಿಸ್ಟ್‌ಗಳ ವೇತನ ಹೆಚ್ಚಳವಾಗಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿಸ್ಟ್‌ಗಳ ಸಂಘದ ಅಧ್ಯಕ್ಷ ಬಿ.ಎಸ್.ದೇಸಾಯಿ ಒತ್ತಾಯಿಸಿದ್ದಾರೆ.

ಗುರುವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಫಾರ್ಮಾಸಿಸ್ಟ್ ಸಂಘ ಏರ್ಪಡಿಸಿದ್ದ, ರಾಜ್ಯ ಮಟ್ಟದ ವೈಜ್ಞಾನಿಕ ಮಹಾಸಮ್ಮೇಳನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

1987ರ ಎಐಸಿಟಿಇ ಕಾಯ್ದೆ ಪ್ರಕಾರ ಫಾರ್ಮಸಿ ಕೋರ್ಸನ್ನು ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ನಂತೆ ತಾಂತ್ರಿಕ ವಿದ್ಯಾರ್ಹತೆ ಎಂದು ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕಾಗಿದೆ. ಕೇಂದ್ರ ಸರಕಾರ ಮತ್ತು ನೆರೆ ರಾಜ್ಯಗಳ ವೇತನಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಫಾರ್ಮಸಿಸ್ಟ್‌ಗಳ ವೇತನ ತುಂಬಾ ಕಡಿಮೆಯಿದೆ. ಹೀಗಾಗಿ ನೆರೆ ರಾಜ್ಯಗಳ ವೇತನ ಶ್ರೇಣಿಯನ್ನು ನಮ್ಮ ರಾಜ್ಯಕ್ಕೆ ವಿಸ್ತರಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆ ಸೃಷ್ಟಿಸಬೇಕು ಎಂದು ಅವರು ಒತ್ತಾಯಿಸಿದರು.

ವೃಂದ ಮತ್ತು ನೇಮಕಾತಿ ಬದಲಾಯಿಸಿ ಭಡ್ತಿಗೆ ಅವಕಾಶ ಕಲ್ಪಿಸುವುದು, ಸೇವಾನಿರತ ಫಾರ್ಮಸಿಸ್ಟ್‌ಗಳ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಸೀಟುಗಳನ್ನು ಮೀಸಲಿಡುವುದು, ಫಾರ್ಮಸಿಸ್ಟ್ ಹುದ್ದೆಯ ಪದನಾಮವನ್ನು ಫಾರ್ಮಸಿ ಅಧಿಕಾರಿ ಎಂದು ಬದಲಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಆರೋಗ್ಯ ಇಲಾಖೆಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಫಾಮಾಸಿಸ್ಟ್‌ಗಳು ತಮ್ಮ ಬೇಡಿಕೆಗಳಿಗೆ ನ್ಯಾಯಯುತ ಮಾರ್ಗವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋರಾಟ ಹಮ್ಮಿಕೊಂಡಿರುವುದು ಸಂತಸ ವಿಷಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ, ಕಾರ್ಯಾಧ್ಯಕ್ಷ ಗಿರೀಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಡಿ.ಎಸ್.ರಹಮತ್ ವುಲ್ಲಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ 10 ವರ್ಷಗಳ ಕಾಲಮಿತಿ ವೇತನ ಮುಂಭಡ್ತಿ ಪಡೆದ ನಂತರ ಯಾವುದೇ ವೇತನ ಶ್ರೆಣಿ ಬದಲಾವಣೆಯಾಗಿಲ್ಲ. ಆದ್ದರಿಂದ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೀರ್ಪಿನಂತೆ ವೇತನ ಜಾರಿ ಮಾಡಬೇಕು. ಜನಸಂಖ್ಯೆಯ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯದ ಮೇರೆಗೆ ಹೆಚ್ಚಿನ ಹುದ್ದೆಯನ್ನು ಸೃಷ್ಟಿಸಬೇಕು

-ಡಿ.ಎಸ್.ರಹಮತ್‌ವುಲ್ಲಾ, ಸಂಘದ ಜಿಲ್ಲಾಧ್ಯಕ್ಷ ಚಿಕ್ಕಬಳ್ಳಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News