ಬಿಜೆಪಿ ಸರ್ವಾಧಿಕಾರಕ್ಕೆ ಪ್ರಜಾಪ್ರಭುತ್ವ ಹಾಳಾಗುತ್ತಿದೆ: ಡಿ.ಕೆ.ಶಿವಕುಮಾರ್

Update: 2020-01-31 12:06 GMT

ಬೆಂಗಳೂರು, ಜ. 31: ‘ಬಿಜೆಪಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಹಾಳು ಮಾಡುತ್ತಿದೆ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣಕ್ಕೆ ಶಾಸಕರು ಅಡ್ಡಿಪಡಿಸುವಂತಿಲ್ಲ ಎಂಬ ಸ್ಪೀಕರ್ ಕಾಗೇರಿ ಅವರು ಹೊರಡಿಸಿರುವ ಸುತ್ತೋಲೆಗೆ ಆಕ್ಷೇಪಿಸಿದರು.

‘ಬಿಜೆಪಿ ಸರಕಾರ ದೇಶದಲ್ಲಿ ತಮ್ಮ ಅಧಿಕಾರದಿಂದ ವಿಪಕ್ಷಗಳು ಸೇರಿ ಇತರೆ ಯಾವುದೇ ಪಕ್ಷಗಳು ಇಲ್ಲದಂತೆ ವರ್ತಿಸುತ್ತಿದೆ. ಇಡೀ ದೇಶದಲ್ಲಿ ಅವರು ತಮ್ಮ ಮನಸ್ಸಿಗೆ ಬಂದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸುತ್ತಾ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ’ ಎಂದು ಟೀಕಿಸಿದರು.

‘ಸ್ಪೀಕರ್ ಅವರು ಬಿಜೆಪಿ ಪಕ್ಷದವರೇ ಆಗಿರಬಹುದು, ಬಹಳ ಸಂತೋಷ. ಅಧಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಗಳನ್ನು ತೀರ್ಮಾನ ಮಾಡಬೇಕಾದರೆ, ವಿಧಾನಸಭೆ ಸಲಹಾ ಸಮಿತಿ ಜತೆ ಕೂತು ಅಧಿವೇಶನ ಹೇಗೆ ನಡೆಯಬೇಕೆಂದು ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕು’ ಎಂದರು.

‘ಯಾವುದೇ ರಾಜಕೀಯ ಪಕ್ಷವಿರಲಿ ಅವರ ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸಲು ಇದು ಶಾಲೆ ಅಲ್ಲ. ಇಲ್ಲಿ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ. ಈ ವಿಚಾರವಾಗಿ ನಾವು ಕೂತು ಚರ್ಚೆ ನಡೆಸಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇವೆ’ ಎಂದು ತಿರುಗೇಟು ನೀಡಿದರು.

ದ್ವೇಷದ ರಾಜಕಾರಣ: ಬಿಎಸ್‌ವೈ ಅಧಿಕಾರ ಸ್ವೀಕರಿಸುವ ವೇಳೆ ‘ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎಂದು ಮಾತು ಕೊಟ್ಟಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ಹಂತದಲ್ಲೂ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ ಎಂದು ಟೀಕಿಸಿದರು.

ಮೈತ್ರಿ ಸರಕಾರದ ಯೋಜನೆ ತಡೆದಿರುವುದಕ್ಕೆ ಹೈಕೋರ್ಟ್ ಛೀಮಾರಿ ಹಾಕಿರುವುದನ್ನು ಮಾಧ್ಯಮಗಳಲ್ಲೇ ನೋಡಿದೆ. ಮೈತ್ರಿ ಸರಕಾರ ಶಾಸಕರಿಗೆ ನೀಡಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನವನ್ನು ತಡೆ ಹಿಡಿದಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಲಾದ ಅನುದಾನವನ್ನು ಕಸಿದುಕೊಂಡಿದ್ದಾರೆ ಎಂದರು.

ಬೇರೆ ರಾಜ್ಯಗಳಿಗೆ ಕೇಂದ್ರದಿಂದ ಸಿಗುತ್ತಿರುವ ಪ್ರಯೋಜನಗಳು ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ. ಇವರು ಏನೇನು ತೆಗೆದುಕೊಂಡು ಬರ್ತಾರೆ ನೋಡೋಣ. ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ನಾವೇ ಇರಬೇಕು ಅಂತಾ ಬಯಸಿ ಅಧಿಕಾರಕ್ಕೆ ಬಂದಿದ್ದೀರಿ, ಸಂತೋಷ. ಆದರೆ ಅದರಿಂದ ರಾಜ್ಯಕ್ಕೆ ಏನಾದರೂ ಪ್ರಯೋಜನ ಆಗಬೇಕಲ್ಲವೇ? ಎಂದರು.

ಗೊಂದಲವಿಲ್ಲ: ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ, ನಮ್ಮ ನಾಯಕರು ಸಕ್ರಿಯರಾಗಿದ್ದಾರೆ. ಕೇವಲ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ಸರಕಾರದ ವಿರುದ್ಧ ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಇಲ್ಲಿ ನಾನು ಯಾರಿಗೂ ವಕ್ತಾರನಾಗಿ ಹೇಳಿಕೆ ಕೊಡಲು ಸಾಧ್ಯವಿಲ್ಲ. ನಾನು ಕೇವಲ ನನಗೆ ಮಾತ್ರ ವಕ್ತಾರ. ಪಕ್ಷದ ಅಧ್ಯಕ್ಷ ಸ್ಥಾನ ವಿಚಾರವನ್ನು ರಸ್ತೆಗೆ ತರಬೇಡಿ ಎಂದರು.

‘ಪಕ್ಷ ಬಿಟ್ಟು ಹೋದ ಶಾಸಕರಿಗೆ ಒಳ್ಳೆಯದಾಗಲಿ. ಅವರು ಪಕ್ಷ ಬಿಟ್ಟು ಆರು ತಿಂಗಳಾಗಿದೆ. ನಾನು ಸದನದಲ್ಲಿ ಎಲ್ಲವನ್ನು ಹೇಳಿದ್ದೇನೆ. ಅವರು ಇಚ್ಛೆಪಟ್ಟು ಹೋಗಿದ್ದಾರೆ. ಅವರು ಏನು ಬಯಸಿ ಹೋಗಿದ್ದರೋ ಅದು ಅವರಿಗೆ ಸಿಗಲಿ ಎಂದು ಬಯಸುತ್ತೇನೆ’

-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News