ಮೋದಿಯ ಭರವಸೆಗಳೆಲ್ಲವೂ ಈಡೇರಿದ್ದರೆ ಸ್ವರ್ಗ ಸೃಷ್ಟಿಯಾಗಿರಬೇಕಿತ್ತು: ಸಿದ್ದರಾಮಯ್ಯ

Update: 2020-01-31 14:27 GMT

ಬೆಂಗಳೂರು, ಜ.31: ರಾಜ್ಯಪಾಲರ ಭಾಷಣ ನಾಡಿನ ಮತ್ತು ಜನತೆಯ ಹಿತಾಸಕ್ತಿಯ ಪರವಾಗಿ ಇದ್ದರೆ ನಾವು ಪ್ರತಿಭಟಿಸುವಂತಹ ಪ್ರಮೇಯವೇ ಬರುವುದಿಲ್ಲ. ಭಾಷಣದಲ್ಲಿ ಆಕ್ಷೇಪಾರ್ಹ ವಿಚಾರಗಳು ಇದ್ದರೆ ಖಂಡಿತಾ ವಿರೋಧಿಸುತ್ತೇವೆ, ಆಗ ನಮ್ಮ ಬಾಯಿ ಮುಚ್ಚಿಸೋಕೆ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕಳೆದ ಬಾರಿ ಕೇಂದ್ರದ ಬಜೆಟ್ ಗಾತ್ರ 27 ಲಕ್ಷ ಕೋಟಿ ರೂ.ಯಾಗಿತ್ತು, ಅದರಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ಖರ್ಚಾಗಿದೆ ಎಂಬುದು ನಾಳೆ ತಿಳಿಯುತ್ತೆ. 6 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ, ಪ್ರಧಾನಿ ಮೋದಿಯವರು ನೀಡಿದ ಭರವಸೆ ಎಲ್ಲವೂ ಈಡೇರಿದ್ದರೆ ಈಗಾಗಲೇ ಸ್ವರ್ಗ ಸೃಷ್ಟಿಯಾಗಿರಬೇಕಿತ್ತು ಎಂದು ತಿಳಿಸಿದ್ದಾರೆ.

ಬಿಜೆಪಿಯವರು ಸ್ವರ್ಗ ಸೃಷ್ಟಿ ಮಾಡ್ತೀವಿ ಅಂತ ಹೇಳಿ ದೇಶವನ್ನು ನರಕ ಮಾಡಿದ್ದಾರೆ. ದೇಶದ ನಿರುದ್ಯೋಗ ಸಮಸ್ಯೆ, ಹಸಿವು, ಜಿಡಿಪಿ ಕುಸಿತ, ಭ್ರಷ್ಟಾಚಾರದ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಉತ್ಪಾದನೆ ಕುಸಿತ, ಇಳಿಕೆಯಾಗುತ್ತಿರುವ ರಫ್ತು ಪ್ರಮಾಣದ ಬಗ್ಗೆ ಮಾತನಾಡಲಿ. ದೇಶದ ಈ ದುಸ್ಥಿತಿಗೆ ಕಾರಣ ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಈಶ್ವರ್ ಅಲ್ಲಾ ತೇರೆ ನಾಮ್ ಸಬ್ಕೋ ಸನ್ಮತಿ ದೇ ಭಗವಾನ್’ ಎಂದು ಸೌಹಾರ್ದತೆ ಸಾರಿದ ಕಾರಣಕ್ಕಾಗಿ ಮಹಾತ್ಮ ಗಾಂಧಿಯವರನ್ನು ಸಂಘಪರಿವಾರ ಗುಂಡಿಟ್ಟು ಕೊಂದಿತ್ತು. ಈಗ ಅದೇ ಸಂಘಟನೆಗೆ ಸೇರಿದ ಗೂಂಡಾ ಒಬ್ಬ ಜಾಮಿಯಾ ವಿಶ್ವವಿದ್ಯಾಲಯದ ಮೌನ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾನೆ. ಸೌಹಾರ್ದತೆ ಎಂದರೆ ಬಿಜೆಪಿಗೆ ಏಕಿಷ್ಟು ಭಯ? ಎಂದು ಅವರು ಕೇಳಿದ್ದಾರೆ.

ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳ ರಾಜ್ ಘಾಟ್‌ಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕಣ್ಣೆದುರೇ ಗೂಂಡಾ ಒಬ್ಬ ಗುಂಡು ಹಾರಿಸಿದ್ರೂ ಪೊಲೀಸರು ಮೌನವಾಗಿದ್ರು. ಗೂಂಡಾವೊಬ್ಬನಿಗೆ ಇಷ್ಟು ಧೈರ್ಯ ಬರಲು ಹೇಗೆ ಸಾಧ್ಯ? ಇದಕ್ಕೆ ಯಾರ ಬೆಂಬಲವಿದೆ? ಎಂಬುದರ ಬಗ್ಗೆ ಮೊದಲು ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ದೇಶ ವಿನಾಶದತ್ತ ಸಾಗುತ್ತಿದೆ. ಸಮಾಜಘಾತುಕರು, ಗೂಂಡಾಗಳೆಲ್ಲ ದೇಶಪ್ರೇಮದ ಸೋಗಿನಲ್ಲಿ ಅಮಾಯಕರ ಹತ್ಯೆಗೆ ನಿಂತಿದ್ದಾರೆ. ಇಂಥ ಹತ್ಯೆಗಳಿಗೆ ಸರಕಾರವೂ ಬೆಂಬಲಿಸುತ್ತಿರುವುದು ದೇಶದ ಕರಾಳ ದಿನಗಳನ್ನು ಖಾತ್ರಿಪಡಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಅವರೇ...ಶಿಕ್ಷಕರ ಕಡೆ ಗಮನ ಕೊಡಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ನಿಮ್ಮ ಸಚಿವ ಸಂಪುಟ ರಚನೆಯ ದಿಲ್ಲಿ ಸರ್ಕಸ್ ಬೇಗ ಮುಗಿಸಿ ರಾಜ್ಯದಲ್ಲಿ ಸಂಬಳ ಇಲ್ಲದೆ ಪರದಾಡುತ್ತಿರುವ ಶಿಕ್ಷಕರ ಕಡೆ ಗಮನಕೊಡಿ. ಸರಕಾರಿ ಖಜಾನೆಯೇ ಖಾಲಿಯಾದರೆ ಎಲ್ಲಿಯ ಸರಕಾರ? ಎಲ್ಲಿಯ ಸಚಿವ ಸಂಪುಟ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News