ನನ್ನ ಬರವಣಿಗೆ ಕಾಲ ಅಂತ್ಯವಾಗಿದೆ: ಎಸ್.ಎಲ್.ಭೈರಪ್ಪ

Update: 2020-01-31 16:33 GMT

ಧಾರವಾಡ, ಜ. 31: ಉತ್ತರಕಾಂಡ ಕಾದಂಬರಿಯ ಬಳಿಕ ನನಗೆ ಹೊಸ ಆಲೋಚನೆಗಳೇ ಹೊಳೆದಿಲ್ಲ. ನನ್ನ ಬರವಣಿಗೆ ಕಾಲ ಅಂತ್ಯವಾಗಿದೆ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

ನಗರದಲ್ಲಿಂದು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಪೂರ್ವದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉತ್ತರಕಾಂಡವೇ ನನ್ನ ಬರವಣಿಗೆಗೆ ಅಂತ್ಯ ಎನ್ನಿಸುತ್ತಿದೆ. ಅದರ ಬಳಿಕ ನನಗೆ ಹೊಸ ಆಲೋಚನೆಗಳೇ ಹೊಳೆಯುತ್ತಿಲ್ಲ. ಮತ್ತೆ ಬರೆಯಬೇಕು ಅನ್ನಿಸಲೇ ಇಲ್ಲ ಎಂದ ಅವರು, ಮತ್ತೆ ಬರೆಯುತ್ತೇನೋ ಇಲ್ಲವೋ. ಬರೆಯಲು ವಯಸ್ಸಿನ ಮಿತಿ ಇರುವುದೂ ಹೌದು ಎಂದು ತಿಳಿಸಿದರು.

ಸಾಹಿತ್ಯದಲ್ಲಿ ಚಳವಳಿಗಳು ಹೆಚ್ಚು ಅಪಾಯಕಾರಿ. ಯಾವುದೋ ಒಂದು ಚಳವಳಿ ನಡೆಯುವ ಕಾಲಘಟ್ಟದಲ್ಲಿ ಅದರ ಪರವಾಗಿ ಕೃತಿಯನ್ನು ರಚಿಸಿದರೆ, ಅದನ್ನು ಪ್ರಶಂಸಿಸುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಹಾಗೆಯ ಆ ಚಳವಳಿ ಬೆಂಬಲಿಸುವ ಪತ್ರಿಕೆಗಳೂ ಅದಕ್ಕೆ ಮನ್ನಣೆ ನೀಡುತ್ತದೆ. ಆದರೆ ಚಳವಳಿ ವಿರುದ್ಧ ಬರೆದರೆ, ಅಷ್ಟೂ ಜನ ಮುಗಿಬೀಳುತ್ತಾರೆ. ಹೀಗಾಗಿ ಸಾಹಿತಿಗೆ ಎಲ್ಲವೂ ಗೊತ್ತಿರಬೇಕು. ಆದರೆ ಯಾವುದಕ್ಕೂ ಗಂಟುಬೀಳಬಾರದು ಎಂದು ಸಲಹೆ ನೀಡಿದರು.

ಜಾತಿ ಸೃಷ್ಟಿಗೆ ಬ್ರಾಹ್ಮಣರನ್ನೇ ಹೆಚ್ಚು ದೂಷಿಸಲಾಗುತ್ತದೆ. ಆದರೆ ಕಸುಬು ಆಧಾರಿತವಾಗಿ ನಮ್ಮಲ್ಲಿ ಜಾತಿಗಳು ಹುಟ್ಟಿಕೊಂಡವೇ ಹೊರತು, ಯಾರೋ ಸೃಷ್ಟಿಸಿದ್ದಲ್ಲ. ತಂದೆಯಂತೆ ನೇಯ್ಗೆಯನ್ನು ಕರಗತ ಮಾಡಿಕೊಂಡ ನೇಕಾರನ ಮಗಳನ್ನು ತನ್ನ ಕಸುಬು ಗೊತ್ತಿರುವ ಮನೆಗೆ ಕೊಟ್ಟನೇ ಹೊರತು ಬೇರೆ ಕುಟುಂಬಕ್ಕಲ್ಲ. ಈಗಲೂ ವೈದ್ಯನಾದ ವರನಿಗೆ ವೈದ್ಯೆಯಾಗಿರುವ ವಧುವನ್ನೇ ಹುಡುಕುತ್ತಿರುವುದು ಆ ಪದ್ಧತಿ ಮುಂದುವರೆದಿರುವುದಕ್ಕೆ ಸಾಕ್ಷಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News