ಶರೀರದಲ್ಲಿ ಹಾರ್ಮೋನ್‌ಗಳ ಸಮತೋಲನ ಕಾಯ್ದುಕೊಳ್ಳಲು ನೈಸರ್ಗಿಕ ಉಪಾಯಗಳಿಲ್ಲಿವೆ

Update: 2020-01-31 16:57 GMT

ನಮ್ಮ ಶರೀರದ ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ಮತ್ತು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಹಾರ್ಮೋನ್ ಅಥವಾ ಅಂತಃಸ್ರಾವಕಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಶರೀರದಲ್ಲಿ ನೈಸರ್ಗಿಕ ರಾಸಾಯನಿಕಗಳಂತೆ ಕಾರ್ಯಾಚರಿಸುವ ಇನ್ಸುಲಿನ್, ಈಸ್ಟ್ರೋಜನ್,ಡೋಪಮೈನ್,ಎಫ್‌ಎಸ್‌ಎಚ್ ಮತ್ತು ಟಿಎಸ್‌ಎಚ್‌ನಂತಹ ಹಾರ್ಮೋನ್‌ಗಳು ನಮ್ಮ ಮನಃಸ್ಥಿತಿ,ಕೂದಲ ಬೆಳವಣಿಗೆ,ಫಲವತ್ತತೆ ಮಟ್ಟ,ಶಕ್ತಿ ಮತ್ತು ಆತಂಕ ಇತ್ಯಾದಿಗಳಿಗೆ ಕಾರಣವಾಗಿವೆ. ನಮ್ಮ ಅಂತಃಸ್ರಾವಕ ವ್ಯವಸ್ಥೆಯು ಹಾರ್ಮೋನ್ ಗಳ ವಿತರಣೆಯನ್ನು ನಿಯಂತ್ರಿಸುತ್ತದೆ ಮತ್ತು ಇದರಲ್ಲಿ ಅತ್ಯಲ್ಪ ವ್ಯತ್ಯಯವೂ ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ಕೆಲವು ನೈಸರ್ಗಿಕ ವಿಧಾನಗಳ ಮೂಲಕ ನಾವು ಹಾರ್ಮೋನ್‌ಗಳ ಸಮತೋಲನವನ್ನು ಕಾಯ್ದುಕೊಳ್ಳಬಹುದು ಮತ್ತು ನಮ್ಮ ಶರೀರವು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ನೆರವಾಗಬಹುದು. ಈ ಕುರಿತು ಮಾಹಿತಿಗಳಿಲ್ಲಿವೆ.

► ಸರಿಯಾಗಿ ಆಹಾರ ಸೇವಿಸಿ

ಸರಿಯಾದ ಆಹಾರ ಸೇವನೆಯು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆಹಾರ ಸೇವನೆಯಲ್ಲಿ ಕೊರತೆಯ ದುಷ್ಪರಿಣಾಮವು ಮೊದಲು ಅಂತಃಸ್ರಾವಕ ವ್ಯವಸ್ಥೆಯ ಮೇಲೆ ಉಂಟಾಗುತ್ತದೆ. ಹಾರ್ಮೋನ್‌ಗಳು ಅತಿ ಕ್ರಿಯಾಶೀಲ ಗೊಳ್ಳದಿರಲು ನಾವು ಸೂಕ್ತ ಪೋಷಕಾಂಶಗಳನ್ನು ಮತ್ತು ವಿವಿಧ ಆಹಾರಗಳನ್ನು ಸೇವಿಸಬೇಕು. ಆಹಾರದಲ್ಲಿ ಪ್ರೋಟೀನ್ ಮತ್ತು ನಾರು ಸಮೃದ್ಧವಾಗಿರಬೇಕು ಹಾಗೂ ಕಾರ್ಬೊಹೈಡ್ರೇಟ್‌ಗಳು ಕಡಿಮೆ ಪ್ರಮಾಣದಲ್ಲಿರಬೇಕು, ಜೊತೆಗೆ ಸಕ್ಕರೆಯ ಅಂಶ ಅತಿಯಾಗಿರದಂತೆ ಎಚ್ಚರಿಕೆ ವಹಿಸಬೇಕು. ಇದರೊಂದಿಗೆ ಹಾರ್ಮೋನ್‌ಗಳ ಉತ್ಪಾದನೆ ಯನ್ನು ಹೆಚ್ಚಿಸುವ ಆರೋಗ್ಯಕರ ಕೊಬ್ಬು ನಮ್ಮ ಆಹಾರದಲ್ಲಿರುವುದು ಕೂಡ ಮುಖ್ಯವಾಗಿದೆ.

► ಆಹಾರದ ಪ್ರಮಾಣ

ತೂಕ ಇಳಿಕೆಗಾಗಿ ಬೇಕಾಬಿಟ್ಟಿಯಾಗಿ ಪಥ್ಯವನ್ನು ಮಾಡುವುದು ಮತ್ತು ಅನಾರೋಗ್ಯಕರ ಆಹಾರ ಸೇವನೆಯ ಅಭ್ಯಾಸಗಳು ಹಾರ್ಮೋನ್‌ಗಳಲ್ಲಿ ಬದಲಾವಣೆ ಗಳಿಗೆ ಕಾರಣವಾಗುತ್ತವೆ. ಅತಿಯಾದ ಆಹಾರ ಅಥವಾ ಕಡಿಮೆ ಆಹಾರ ಸೇವನೆಯು ಹೆಚ್ಚಿನ ಇನ್ಸುಲಿನ್ ಮಟ್ಟ,ಕಾರ್ಟಿಸಾಲ್ ಉತ್ಪಾದನೆ ಮತ್ತು ಚಯಾಪಚಯದಲ್ಲಿ ಏರುಪೇರುಗಳಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಯಸ್ಸು,ಲಿಂಗ ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಸರಿಯಾದ ಕ್ಯಾಲರಿ ಸಮತೋಲನ ಮತ್ತು ಸೂಕ್ತ ಆಹಾರ ಮುಖ್ಯವಾಗಿದೆ.

► ನಿಯಮಿತ ವ್ಯಾಯಾಮ

ವ್ಯಾಯಾಮವು ನಮ್ಮನ್ನು ಫಿಟ್ ಆಗಿರಿಸುವುದು ಮಾತ್ರವಲ್ಲ,ಸೂಕ್ತ ಹಾರ್ಮೋನ್ ಸಮತೋಲನವನ್ನೂ ಕಾಯ್ದುಕೊಳ್ಳುತ್ತದೆ. ನಿಯಮಿತ ದೈಹಿಕ ಚಟುವಟಿಕೆಗಳು ಹೆಚ್ಚುವರಿ ಕೊಬ್ಬನ್ನು ಕರಗಿಸಲು,ಉರಿಯೂತ ನಿರೋಧಕ ಹಾರ್ಮೋನ್‌ಗಳ ಉತ್ಪಾದನೆಯನ್ನು ಮತ್ತು ಇನ್ಸುಲಿನ್ ಸಂವೇದನಾಶೀಲತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಎರೋಬಿಕ್ ವ್ಯಾಯಾಮವು ಹಾರ್ಮೋನ್ ಮಟ್ಟಗಳನ್ನು ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ.

► ಸುಖವಾಗಿ ನಿದ್ರಿಸಿ

ನಿದ್ರೆಯ ಕೊರತೆಯಿಂದಾಗಿ ಬೆಳಗಿನ ಸಮಯದಲ್ಲಿ ನಿಮಗೆ ಮಂಪರು ಆವರಿಸಿಕೊಳ್ಳುತ್ತಿದ್ದರೆ ಈ ಬಗ್ಗೆ ನೀವು ಯೋಚಿಸಬೇಕಾಗುತ್ತದೆ. ಶರೀರಕ್ಕೆ ಸಾಕಷ್ಟು ನಿದ್ರೆ ದೊರೆಯದಿದ್ದರೆ ಅದು ಅಂತಃಸ್ರಾವಕ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ. ಯಾವುದೇ ಅಡೆತಡೆಯಿಲ್ಲದೆ ಸುಖವಾದ ನಿದ್ರೆ ಮಾಡುವುದು ಅಗತ್ಯವಾಗಿದೆ. ನಾವು ಗಾಢನಿದ್ರೆಯಲ್ಲಿರುವಾಗ ನಮ್ಮ ಶರೀರವು ವಿಷವಸ್ತುಗಳ ವಿರುದ್ಧ ಹೋರಾಡುತ್ತಿರುತ್ತದೆ ಮತ್ತು ಅಗತ್ಯವಾದ ಹಾರ್ಮೋನ್‌ಗಳ ಉತ್ಪಾದನೆಯಾಗುತ್ತಿರುತ್ತದೆ. ಸಾಕಷ್ಟು ನಿದ್ರೆ ದೊರೆಯದಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

► ಗಿಡಮೂಲಿಕೆಗಳ ಬಗ್ಗೆ ಪ್ರೀತಿಯಿರಲಿ

ನಮ್ಮ ಜೀವನಶೈಲಿಯಲ್ಲಿ ಬದಲಾವಣೆಯ ಮೂಲಕ ನಾವು ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ನಮಗೆ ಅಗತ್ಯವಾಗಿರುವುದು ಕೆಲವು ಗಿಡಮೂಲಿಕೆಗಳು ಮತ್ತು ಸಸ್ಯಗಳು ಮಾತ್ರ. ಇವು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು,ಒತ್ತಡದ ವಿರುದ್ಧ ಹೋರಾಡಲು,ಹಾರ್ಮೋನ್‌ಗಳ ಸಮತೋಲನವನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಅಶ್ವಗಂಧಾ, ಅರಿಷಿಣ, ತುಳಸಿ, ಅತಿಮಧುರ,ಜಿನ್ಸೆೆಂಗ್ ಇವು ನಾವು ಸೇವಿಸಬಹುದಾದ ಇಂತಹ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News