ಈ ಟಿಪ್ಸ್ ಪಾಲಿಸಿ, ಹ್ಯಾಕರ್‌ಗಳನ್ನು ದೂರವಿರಿಸಿ

Update: 2020-01-31 16:59 GMT

ಮಾಲ್‌ವೇರ್ ಅನ್ನು ಒಳಗೊಂಡಿದ್ದ ವೀಡಿಯೊ ಫೈಲ್‌ನ್ನು ಕಳುಹಿಸಿ ಅಮೆಝಾನ್ ಸ್ಥಾಪಕ ಜೆಫ್ ಬೆಝೊಸ್ ಅವರ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಿದ್ದು ಇತ್ತೀಚಿಗೆ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು.

ಇಂದು ಸ್ಮಾರ್ಟ್‌ ಫೋನ್‌ಗಳು ವೈಯಕ್ತಿಕ ಮಾಹಿತಿಗಳನ್ನೊಂಡ ಸಾಧನಗಳಾಗಿವೆ. ಸ್ಮಾರ್ಟ್‌ಫೋನ್ ಮೂಲಕ ನಾವು ಕರೆಗಳನ್ನು ಮಾಡುತ್ತೇವೆ,ಸಂದೇಶಗಳನ್ನು ರವಾನಿಸುತ್ತೇವೆ,ಫೋಟೊಗಳನ್ನು ತೆಗೆಯುತ್ತೇವೆ. ನಮ್ಮ ಹಣಕಾಸು ವಹಿವಾಟುಗಳಿಗೆ ನೆರವಾಗುವ ಆ್ಯಪ್‌ಗಳೂ ಅದರಲ್ಲಿರುತ್ತವೆ. ಪ್ರಮುಖ ಉದ್ಯಮಗಳನ್ನು ಕೈಗೊಳ್ಳಲೂ ಸ್ಮಾರ್ಟ್‌ಫೋನ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ತಂತ್ರಜ್ಞಾನ ಸುಧಾರಣೆ ಯಿಂದಾಗಿ ಇಂದು ಅಂಗೈ ಅಗಲದ ಸ್ಮಾರ್ಟ್ ಫೋನ್‌ಗಳು ನಿಭಾಯಿಸದ ಕೆಲಸಗಳಿಲ್ಲ. ಸದಾ ಹೊಂಚು ಹಾಕುತ್ತಿರುವ ಹ್ಯಾಕರ್‌ಗಳು ಫೋನ್‌ಗಳನ್ನು ಹ್ಯಾಕ್ ಮಾಡುವುದೂ ಮಾಮೂಲಾಗಿಬಿಟ್ಟಿದೆ. ನಾವು ಸ್ವಲ್ಪ ಯಾಮಾರಿದರೂ ಹ್ಯಾಕರ್‌ಗಳು ನಮ್ಮ ಬ್ಯಾಂಕ್ ಖಾತೆಗಳನ್ನು ಕ್ಷಣಮಾತ್ರದಲ್ಲಿ ಚೊಕ್ಕಟ ಮಾಡಿಬಿಡುತ್ತಾರೆ. ಇಂತಹ ಹ್ಯಾಕರ್‌ಗಳಿಂದ ಅಪಾಯವನ್ನು ತಪ್ಪಿಸಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿವೆ.

► ಒ.ಎಸ್. ಅಪ್‌ಡೇಟ್ ಮತ್ತು ಅಪ್‌ಡೇಟ್ ಆ್ಯಪ್ಸ್

ಹೆಚ್ಚಿನ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್ (ಒ.ಎಸ್.)ಗಳು ಮತ್ತು ಆ್ಯಪ್‌ಗಳು ನಿಗದಿತ ಸುರಕ್ಷತಾ ಅಪ್‌ಡೇಟ್‌ಗಳೊಂದಿಗೆ ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಿರುತ್ತವೆ. ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗಳಿಗೆ ಕನ್ನ ಹಾಕಲು ಹೊಂಚು ಹಾಕುತ್ತಲೇ ಇರುತ್ತಾರೆ. ಫೋನ್‌ಗಳು ಮತ್ತು ಆ್ಯಪ್‌ಗಳನ್ನು ಯಾವಾಗಲೂ ಅಪ್‌ಡೇಟ್ ಮಾಡುತ್ತಿರುವುದರಿಂದ ಇಂತಹ ಅಪಾಯವನ್ನು ದೂರವಿಡಲು ಸಾಧ್ಯ.

► ವೀಡಿಯೊಗಳು ಮತ್ತು ಲಿಂಕ್‌ಗಳು

ಹ್ಯಾಕರ್‌ಗಳು ನಮ್ಮ ಮೇಲ್‌ಬಾಕ್ಸ್‌ಗಳಿಗೆ ಫಿಷಿಂಗ್ ಮೇಲ್‌ಗಳನ್ನು ಕಳುಹಿಸಿ ನಾವು ಮಾಲ್‌ವೇರ್‌ನ್ನು ಒಳಗೊಂಡಿರುವ ಫೈಲ್‌ನ್ನು ಡೌನ್‌ಲೋಡ್ ಮಾಡುವಂತೆ ಅಥವಾ ಲಿಂಕ್‌ನ್ನು ತೆರೆಯುವಂತೆ ಮಾಡುತ್ತಾರೆ. ಫೋನ್‌ಗಳಲ್ಲಿ ಹ್ಯಾಕಿಂಗ್‌ಗೆ ಗುರಿಯಾಗುವ ಅಪಾಯ ಸಾಮಾಜಿಕ ಜಾಲತಾಣ ಆ್ಯಪ್‌ಗಳ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬರುತ್ತವೆ. ಭದ್ರತಾ ತಜ್ಞರು ಹೇಳುವಂತೆ ಫೋನ್‌ನಲ್ಲಿ ಮಾಲ್‌ವೇರ್‌ನ್ನು ನುಸುಳಿಸುವ ಲಿಂಕ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಅಥವಾ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸುವ ಮೂಲಕ ಫೋನ್ ಅನ್ನು ಹ್ಯಾಕ್ ಮಾಡುವುದು ಮಾಮೂಲಾಗಿದೆ. ಹೀಗಾಗಿ ಅಪರಿಚಿತ ನಂಬರ್‌ಗಳಿಂದ ಬರುವ ಯಾವುದೇ ವೀಡಿಯೊಗಳನ್ನು,ಲಿಂಕ್‌ಗಳನ್ನು ಮತ್ತು ಎಸ್‌ಎಂಎಸ್‌ಗಳನ್ನು ತೆರೆಯುವ ಗೋಜಿಗೆ ಹೋಗಲೇಬೇಡಿ.

► ಆ್ಯಂಟಿವೈರಸ್ ಸಾಫ್ಟ್‌ವೇರ್

ಸ್ಮಾರ್ಟ್‌ಫೋನ್‌ಗಳು ಕಂಪ್ಯೂಟರ್‌ಗಳಂತೆ ವಂಚನೆ ತಂತ್ರಗಳಿಗೆ ಸುಲಭಭೇದ್ಯ ವಾಗಿವೆ. ಹೀಗಾಗಿ ಸೆಕ್ಯೂರಿಟಿ ಸಾಫ್ಟ್‌ವೇರ್‌ನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ. ವಿಶೇಷವಾಗಿ,ಸ್ಮಾರ್ಟ್‌ಫೋನ್ ಬಳಕೆದಾರರ ಉದ್ಯಮಗಳ ಮಾಹಿತಿಗಳನ್ನು ಒಳಗೊಂಡಿದ್ದರೆ ಉತ್ತಮ ಆ್ಯಂಟಿವೈರಸ್ ಸಾಫ್ಟ್‌ವೇರ್‌ಗಾಗಿ ದುಡ್ಡು ಖರ್ಚು ಮಾಡಲು ಹಿಂಜರಿಯಬಾರದು. ಆ್ಯಪಲ್ ಫೋನ್‌ಗಿಂತ ಆ್ಯಂಡ್ರಾಯ್ಡಾ ಫೋನ್‌ನಲ್ಲಿ ಭದ್ರತಾ ಸಾಫ್ಟ್‌ವೇರ್‌ಗಳ ಅಳವಡಿಕೆ ಹೆಚ್ಚು ಮುಖ್ಯ ಎನ್ನುತ್ತಾರೆ ತಜ್ಞರು.

► ಆ್ಯಪ್ ಡೌನ್‌ಲೋಡ್

ಅನಧಿಕೃತ ಆ್ಯಪ್ ಸ್ಟೋರ್‌ಗಳು ಮತ್ತು ವೆಬ್‌ಸೈಟ್‌ಗಳು ಮಾಲ್‌ವೇರ್ ನಮ್ಮ ಫೋನ್‌ಗಳನ್ನು ಪ್ರವೇಶಿಸುವಂತೆ ಮಾಡುತ್ತವೆ. ಆ್ಯಂಡ್ರಾಯ್ಡಾ ಫೋನ್‌ಗಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಐಫೋನ್‌ಗಳಿಗಾಗಿ ಆ್ಯಪ್ ಸ್ಟೋರ್‌ನಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆದರೆ ಅಧಿಕೃತ ಆ್ಯಪ್ ಸ್ಟೋರ್‌ಗಳಲ್ಲಿಯೂ ನಕಲಿ ಆ್ಯಪ್‌ಗಳ ಹಾವಳಿಯಿರುವುದರಿಂದ ಅಲ್ಲಿಂದ ಆ್ಯಪ್ ಡೌನ್‌ಲೋಡ್ ಮಾಡುವಾಗಲೂ ಎಚ್ಚರಿಕೆಯಿಂದಿದ್ದರೆ ಒಳ್ಳೆಯದು.

► ಡಾಟಾ ಬ್ಯಾಕಪ್

ಫೋನ್ ಕಳ್ಳತನವಾದಾಗ ಅಥವಾ ಫೋನ್‌ನ ಸಾಫ್ಟ್‌ವೇರ್‌ನಲ್ಲಿ ದೋಷವುಂಟಾದಾಗ ಅಗತ್ಯ ಮಾಹಿತಿಗಳು ಕೈತಪ್ಪದಂತಿರಲು ಮಹತ್ವದ ಡಾಟಾಗಳನ್ನು ಕ್ಲೌಡ್‌ನಲ್ಲಿ ಬ್ಯಾಕಪ್ ಮಾಡಬೇಕು ಎನ್ನುತ್ತಾರೆ ತಜ್ಞರು. ಈ ಬ್ಯಾಕಪ್ ಕೇವಲ ಸಂಪರ್ಕಗಳು,ಫೋಟೊಗಳು ಮತ್ತು ವೀಡಿಯೊಗಳಿಗೆ ಸೀಮಿತವಾಗಬಾರದು,ಟೆಕ್ಸ್ಟ್‌ಫೈಲ್ ಡೌನ್‌ಲೋಡ್‌ಗಳು, ನೋಟ್ಸ್ ಮತ್ತು ಆಡಿಯೊ ರೆಕಾರ್ಡಿಂಗ್‌ಗಳನ್ನೂ ಒಳಗೊಂಡಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News