ಬಿಸಿಯೂಟ ಸಿಬ್ಬಂದಿಗೆ ಜಾತಿನಿಂದನೆ ಮಾಡಿದರೆ ಕ್ರಿಮಿನಲ್ ಮೊಕದ್ದಮೆ: ಶಿಕ್ಷಣ ಇಲಾಖೆ ಆಯುಕ್ತ ಎಚ್ಚರಿಕೆ

Update: 2020-01-31 17:45 GMT

ಬೆಂಗಳೂರು, ಜ.31: ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯ ಸಿಬ್ಬಂದಿಗಳ ಮೇಲೆ ಜಾತಿ ತಾರತಮ್ಯ, ಕಿರುಕುಳ, ದೌರ್ಜನ್ಯ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಬಿಸಿಯೂಟ ತಯಾರಿಕಾ ಸಿಬ್ಬಂದಿಗಳ ಕುಂದು-ಕೊರತೆಗಳ ಕುರಿತ ಅಧಿಕಾರಿಗಳ ಸಭೆಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರು ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಉದ್ದೇಶಪೂರ್ವಕವಾಗಿ ಜಾತಿ ಆಧಾರದ ಮೇಲೆ ಬೇರೊಂದು ನೆಪವೊಡ್ಡಿ ಕೆಲಸದಿಂದ ತೆಗೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಜಿಲ್ಲಾ ಉಪನಿರ್ದೇಶಕರು ಖುದ್ದಾಗಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಸಕಾರಣವಿಲ್ಲದೆ ತೆಗೆದು ಹಾಕಿದಲ್ಲಿ ಅಂತಹವರನ್ನು ಕೂಡಲೇ ಸೇವೆಯಲ್ಲಿ ಮುಂದುವರೆಸಬೇಕು. ಅಡುಗೆ ಸಿಬ್ಬಂದಿಗಳ ಮೇಲೆ ನಡೆಯುವ ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಕಿರುಕುಳಗಳು ಕಂಡುಬಂದರೆ ಕೂಡಲೇ ಮಹಿಳಾ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ವಿಚಾರಣೆ ನಡೆಸಬೇಕು. ಕಿರುಕುಳ ನೀಡಿರುವುದು ದೃಢಪಟ್ಟಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರ ತಯಾರಿಸುವುದನ್ನು ಹೊರತುಪಡಿಸಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳು ಖಾಸಗಿ ಸಭೆ ಸಮಾರಂಭಗಳಲ್ಲಿ ಅಥವಾ ಶಿಕ್ಷಕರ ಖಾಸಗಿ ಕಾರ್ಯಕ್ರಮಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ಸಿಬ್ಬಂದಿಯನ್ನು ಉಪಯೋಗಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಶಾಲೆಗಳಲ್ಲಿ ಅಡುಗೆಗೆ ಉಪಯೋಗಿಸುವ ದವಸ ಧಾನ್ಯಗಳಲ್ಲಿ ಹುಳುಗಳು ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಸಹಾಯಕ ನಿರ್ದೇಶಕರ ಗಮನಕ್ಕೆ ತಂದು ಬದಲಿ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು. ಒಂದು ವೇಳೆ ಹಾಳಾದ ದವಸ ಧಾನ್ಯಗಳನ್ನೆ ಉಪಯೋಗಿಸಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಕ್ರಮ ಕೈಗೊಳ್ಳಲಾಗುವುದು.

ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ಸಿಬ್ಬಂದಿಗಳ ಸಂಭಾವನೆಯನ್ನು ವಿಳಂಬವಾಗಿ ಪಾವತಿಸುತ್ತಿರುವ ಬಗ್ಗೆ ದೂರು ಬರುತ್ತಿದೆ. ಎಲ್ಲ ತಾಲೂಕು ಸಹಾಯಕ ನಿರ್ದೇಶಕರು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಅಡುಗೆ ಸಿಬ್ಬಂದಿಗಳ ಸಂಭಾವನೆಯನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪಾವತಿಸುವಂತೆ ಸಭೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News