ಪೌರತ್ವ ಕಾಯ್ದೆಯನ್ನು ಆಕ್ರಮಣಕಾರಿಯಾಗಿ ಸಮರ್ಥಿಸಿಕೊಳ್ಳಲು ಎನ್‌ಡಿಎ ಸಂಸದರಿಗೆ ಪ್ರಧಾನಿ ಸೂಚನೆ

Update: 2020-01-31 18:01 GMT

ಹೊಸದಿಲ್ಲಿ, ಜ.31: ಸಂಸತ್ತಿನಲ್ಲಿ ಪೌರತ್ವ ಕಾಯ್ದೆಯ ವಿಷಯದಲ್ಲಿ ರಕ್ಷಣಾತ್ಮಕ ನಿಲುವು ತಳೆಯಬಾರದು. ಇದನ್ನು ಆಕ್ರಮಣಕಾರಿಯಾಗಿ ಸಮರ್ಥಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಎನ್‌ಡಿಎ ಮೈತ್ರಿಕೂಟದ ಸದಸ್ಯ ಪಕ್ಷಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಬಜೆಟ್ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಹೊಸದಿಲ್ಲಿಯಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಮೋದಿ ಈ ಸೂಚನೆ ನೀಡಿದ್ದಾರೆ. ಪೌರತ್ವ ಕಾಯ್ದೆ ತಾರತಮ್ಯದಿಂದ ಕೂಡಿದೆ ಎಂದು ವಾದಿಸುವವರಿಗೆ ಆಕ್ರಮಣಕಾರಿ ರೀತಿಯಲ್ಲಿ ತಿರುಗೇಟು ನೀಡುವಂತೆ ಮತ್ತು ಸರಕಾರ ಯಾವುದೇ ಸಂದರ್ಭದಲ್ಲಿ ನಾಗರಿಕರನ್ನು ಪ್ರತ್ಯೇಕಿಸುವುದಿಲ್ಲ ಎಂದು ಪ್ರತಿಯೊಬ್ಬರಿಗೂ ದೃಢವಾಗಿ ಉತ್ತರಿಸುವಂತೆ ಎನ್‌ಡಿಎ ಸಂಸದರಿಗೆ ಪ್ರಧಾನಿ ಮೋದಿ ಹೇಳಿದ್ದಾರೆ.

ಪೌರತ್ವ ಕಾಯ್ದೆಯ ವಿಷಯದಲ್ಲಿ ಕೆಲವರು ದೇಶದ ಜನರಿಗೆ ತಪ್ಪುಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮುಸ್ಲಿಮರೂ ಈ ದೇಶದ ಭಾಗವಾಗಿದ್ದು ಇತರರಂತೆಯೇ ಸಮಾನ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದ್ದಾರೆ ಎಂದು ಮೋದಿ ಹೇಳಿದರು. ಬಳಿಕ ಪೌರತ್ವ ಕಾಯ್ದೆ, ಬೋಡೋ ಶಾಂತಿ ಒಪ್ಪಂದ, ಕರ್ತಾರ್‌ಪುರ ಕಾರಿಡಾರ್, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮುಂತಾದ ವಿಷಯದಲ್ಲಿ  ಪ್ರಧಾನಿಯನ್ನು ಬೆಂಬಲಿಸಿ ನಿರ್ಣಯವನ್ನು ಎನ್‌ಡಿಎ ಸಂಸದರು ಅಂಗೀಕರಿಸಿದ್ದಾರೆ. ಪೌರತ್ವ ಕಾಯ್ದೆ ಜಾರಿಗೊಳಿಸುವ ಮೂಲಕ ಮಹಾತ್ಮಾ ಗಾಂಧೀಜಿಯವರ ಕನಸನ್ನು ಪ್ರಧಾನಿ ಮೋದಿ ನನಸಾಗಿಸಿದ್ದಾರೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News