×
Ad

ಕವಿ ಸಿರಾಜ್ ಬಿಸರಳ್ಳಿ ವಿರುದ್ಧ ಸರಕಾರದ ಕ್ರಮ ಖಂಡನೀಯ: ಸಾಹಿತಿ ಎಸ್.ದಿವಾಕರ್

Update: 2020-01-31 23:58 IST

ಬೆಂಗಳೂರು, ಜ.31: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಹಗಾರರ ಚಿಂತನೆಯ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಪ್ರಭುತ್ವದ ಕ್ರಮ ಖಂಡನೀಯ ಎಂದು ಸಾಹಿತಿ, ವಿಮರ್ಶಕ ಎಸ್.ದಿವಾಕರ್ ತಿಳಿಸಿದರು.

ಬಹುರೂಪಿ ಪ್ರಕಾಶನ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಎಸ್.ದಿವಾಕರ್ ಅವರ ಕವನ ಸಂಕಲನ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರಹಗಾರರಿಗೆ ಇದನ್ನೇ ಬರೆಯಬೇಕೆಂದು ಪ್ರಭುತ್ವ ನಿರ್ಧರಿಸುವುದಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ವಿಷಾದಿಸಿದರು.

ಕವಿಗೆ ಬರೆಯುವ ಸ್ವಾತಂತ್ರ ಅತಿ ಮುಖ್ಯ. ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಸರಕಾರದ ಕ್ರಮ ಸ್ವಾತಂತ್ರ ಹರಣವಾಗಿದೆ. ಏನು ಬರೆಯಬೇಕು, ಹೇಗೆ ಬರೆಯಬೇಕೆಂಬುದನ್ನು ಯಾವುದೇ ಪ್ರಭುತ್ವ ನಿರ್ದೇಶಿಸಲು ಸಾಧ್ಯವಿಲ್ಲ. ಹಾಗೇನಾದರೂ ನಿರ್ದೇಶಿಸಿದರೆ ಎಲ್ಲಾ ಲೇಖಕರೂ ಅದರ ವಿರುದ್ಧ ನಿಲ್ಲಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಚ.ಹ.ರಘುನಾಥ್ ಮಾತನಾಡಿ, ಈ ಹಿಂದೆ ಗೋಪಾಲಕೃಷ್ಣ ಅಡಿಗರು ಕವಿತೆಗಳನ್ನು ಬರೆದಾಗಲೂ ಈ ರೀತಿಯ ವಾತಾವರಣ ನಿರ್ಮಾಣ ಆಗಿತ್ತು. ಪ್ರಭುತ್ವದ ಇಂತಹ ಧೋರಣೆಗಳ ವಿರುದ್ಧ ಸಾಹಿತಿಗಳೆಲ್ಲರೂ ಒಟ್ಟಾಗಿ ಪ್ರತಿರೋಧ ಒಡ್ಡಲೇಬೇಕಾಗುತ್ತದೆ ಎಂದರು.

ಇಂದು ಬಿಡುಗಡೆಯಾಗಿರುವ ಎಸ್.ದಿವಾಕರ್‌ರವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಪದ್ಯ ಸಂಕಲನವು ರಾಜಕೀಯ ಆಶಯದ ವಸ್ತುವನ್ನು ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಅವಧಿ ಬ್ಲಾಗ್‌ನ ಸಂಪಾದಕ ಜಿ.ಎನ್.ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News