ಅತಿಯಾದ ಪ್ರೋಟಿನ್ ಸೇವನೆಯ ಅಪಾಯಗಳು ನಿಮಗೆ ಗೊತ್ತೇ?

Update: 2020-02-01 16:05 GMT

ಪ್ರೋಟಿನ್ ಬೆಳವಣಿಗೆ ಮತ್ತು ನಿರ್ವಹಣೆಗಾಗಿ ನಮ್ಮ ಶರೀರಕ್ಕೆ ಅತ್ಯಗತ್ಯವಾಗಿರುವ ಪೋಷಕಾಂಶವಾಗಿದೆ. ಸ್ನಾಯುಗಳ ಬೆಳವಣಿಗೆ,ಹಾನಿಗೀಡಾದ ಅಂಗಾಂಶಗಳ ದುರಸ್ತಿ,ವಿವಿಧ ಹಾರ್ಮೋನ್‌ಗಳ ತಯಾರಿಕೆ ಮತ್ತು ಚಯಾಪಚಯವನ್ನು ಹೆಚ್ಚಿಸುವುದು ಇತ್ಯಾದಿ ಹಲವಾರು ಜೈವಿಕ ಪ್ರಕ್ರಿಯೆಗಳಲ್ಲಿ ಅದು ಪ್ರಮುಖ ಪಾತ್ರವನ್ನು ಹೊಂದಿದೆ.

ಮಾಂಸ,ಡೇರಿ ಉತ್ಪನ್ನಗಳು,ಮೀನು ಮತ್ತು ಮೊಟ್ಟೆ ಇತ್ಯಾದಿಗಳು ಪ್ರಾಣಿಜನ್ಯ ಪ್ರೋಟಿನ್ ಆಗಿದ್ದರೆ ಮುಖ್ಯವಾಗಿ ಧಾನ್ಯಗಳು, ಬೀಜಗಳು, ಓಟ್ಸ್,ನವಣೆ,ಪೀನಟ್ ಬಟರ್,ಕಾಮಕಸ್ತೂರಿ ಇತ್ಯಾದಿಗಳು ಸಸ್ಯಜನ್ಯ ಪ್ರೋಟಿನ್‌ಗಳಾಗಿವೆ.

ಪ್ರೋಟಿನ್ ನಮ್ಮ ಶರೀರಕ್ಕೆ ಎಷ್ಟೇ ಮುಖ್ಯವಾಗಿರಲಿ,ಅದರ ಸೇವನೆಗೂ ಇತಿಮಿತಿಗಳಿವೆ. ಅತಿಯಾದ ಪ್ರೋಟಿನ್ ಸೇವನೆಯು ಜಠರದ ಕ್ಯಾನ್ಸರ್,ಕರುಳು ಕ್ಯಾನ್ಸರ್,ಬೋನ್ ಹೋಮಿಯೊಸ್ಟಾಟಿಸ್,ಯಕೃತ್ತಿನ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಯ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಕೆಲವು ಅಪಾಯಗಳ ಕುರಿತು ಮಾಹಿತಿಯಿಲ್ಲಿದೆ.....

* ಅನಪೇಕ್ಷಿತ ತೂಕ ಏರಿಕೆ

 ಸಾಕಷ್ಟು ಪ್ರೋಟಿನ್ ಒಳಗೊಂಡಿರುವ ಆಹಾರಗಳು ಶರೀರದ ತೂಕವನ್ನು ಹೆಚ್ಚಿಸಲು ನೆರವಾಗುತ್ತವೆ,ಆದರೆ ಅದರ ಅತಿಯಾದ ಸೇವನೆ ಅನಪೇಕ್ಷಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಆಹಾರದಲ್ಲಿ ಪ್ರೋಟಿನ್ ಪ್ರಮಾಣ ಅತಿಯಾದಾಗ ಹೆಚ್ಚುವರಿ ಪ್ರೋಟಿನ್ ಕೊಬ್ಬಿನ ರೂಪದಲ್ಲಿ ಶರೀರದಲ್ಲಿ ಸಂಗ್ರಹವಾಗುತ್ತದೆ ಮತ್ತು ಇದು ತೂಕವನ್ನು ಹೆಚ್ಚಿಸುತ್ತದೆ. ಅತಿಯಾಗಿ ಪ್ರೋಟಿನ್ ಸೇವನೆಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿಗಳು ನಮ್ಮ ಶರೀರವನ್ನು ಸೇರುವುದು ಇದಕ್ಕೆ ಕಾರಣ.

* ಮಲಬದ್ಧತೆ

ನಾರು ಒಂದು ವಿಧದ ಕಾರ್ಬೊಹೈಡ್ರೇಟ್ ಆಗಿದ್ದು,ಕರುಳು ಮತ್ತು ಜೀರ್ಣಾಂಗದ ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ನೆರವಾಗುತ್ತದೆ. ನಾವು ಅತಿಯಾಗಿ ಪ್ರೋಟಿನ್ ಸೇವಿಸಿದಾಗ ನಾರಿನ ಪ್ರಮಾಣ ನಿರ್ಬಂಧಿಸಲ್ಪಡುತ್ತದೆ ಮತ್ತು ಮಲಬದ್ಧತೆಯನ್ನುಂಟು ಮಾಡುತ್ತದೆ. ನಾರಿನೊಂದಿಗೆ ನೀರಿನ ಸೇವನೆಯು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

* ಮೂತ್ರಪಿಂಡಗಳಿಗೆ ತೊಂದರೆ

ಅತಿಯಾದ ಪ್ರೋಟಿನ್ ಸೇವನೆಯು ಮೂತ್ರಪಿಂಡಗಳಲ್ಲಿ ಆಮ್ಲಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಆಮ್ಲಗಳ ಅತಿಯಾದ ಸ್ರವಿಸುವಿಕೆಯು ಕ್ಯಾಲ್ಸಿಯಂ ಮೂತ್ರಪಿಂಡ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ. ಪ್ರಾಣಿಜನ್ಯ ಪ್ರೋಟಿನ್‌ನ ಅತಿಯಾದ ಸೇವನೆಯೂ ಯೂರಿಕ್ ಆ್ಯಸಿಡ್ ಕಲ್ಲುಗಳನ್ನು ಸೃಷ್ಟಿಸುತ್ತದೆ. ಅಲ್ಲದೆ ಅತಿಯಾದ ಪ್ರೋಟಿನ್ ಸೇವನೆಯಿಂದ ಶರೀರದ ನೀರಿನ ಮಟ್ಟದ ಕುಸಿತವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಲ್ಲದು.

* ನಿರ್ಜಲೀಕರಣ

ಶರೀರದಲ್ಲಿ ಪ್ರೋಟಿನ್ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದಾಗ ಸಾರಜನಕ ಮತ್ತು ಅಮಿನೊ ಆಮ್ಲಗಳ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ನಮ್ಮ ಮೂತ್ರಪಿಂಡ ವ್ಯವಸ್ಥೆಯು ಸಾರಜನಕದ ಚಯಾಪಚಯ ಮತ್ತು ಅದನ್ನು ದೇಹದಿಂದ ಹೊರಕ್ಕೆ ಹಾಕುವಲ್ಲಿ ನಿರ್ದಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಸಾರಜನಕದ ಮಟ್ಟವು ಈ ಸಾಮರ್ಥ್ಯವನ್ನು ಮೀರಿದಾಗ ಅದನ್ನು ಹೊರಹಾಕಲು ಶರೀರವು ಹೆಚ್ಚು ನೀರನ್ನು ಬಳಸಿಕೊಳ್ಳುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಶರೀರದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.

* ಕೆಟ್ಟ ಉಸಿರು

ನಾವು ಸೇವಿಸುವ ಆಹಾರದಲ್ಲಿ ಅತಿಯಾದ ಪ್ರೋಟಿನ್ ಇದ್ದಾಗ ನಮ್ಮ ಶರೀರವು ಕೀಟೊ ಪಥ್ಯೃಕ್ಕೊಳಗಾಗುತ್ತದೆ ಮತ್ತು ಇದರಿಂದ ಶರೀರವು ಕಾರ್ಬೊಹೈಡ್ರೇಟ್‌ಗಳ ಬದಲು ಪ್ರೋಟಿನ್ ಮತ್ತು ಕೊಬ್ಬಿನಿಂದ ಹೆಚ್ಚು ಕ್ಯಾಲರಿಗಳನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಯಕೃತ್ತಿನಿಂದ ಬಿಡುಗಡೆಗೊಳ್ಳುವ ‘ಕೀಟೋನ್’ ರಕ್ತ,ಮೂತ್ರ ಮತ್ತು ಉಸಿರಿನೊಂದಿಗೆ ಮಿಶ್ರಗೊಳ್ಳುತ್ತದೆ. ಅತಿಯಾದ ಪ್ರೋಟಿನ್ ಸೇವನೆಯಿಂದಾಗಿ ಕೀಟೋನ್ ಹೆಚ್ಚುವರಿ ಪ್ರಮಾಣದಲ್ಲಿ ಬಿಡುಗಡೆಯಾಗುವುದು ಕೆಟ್ಟ ಉಸಿರಿಗೆ ಕಾರಣವಾಗುತ್ತದೆ.

* ಮಿದುಳಿನ ಸಾಮರ್ಥ್ಯ ಕುಂಠಿತ

ಅತಿಯಾದ ಪ್ರೋಟಿನ್ ಮಿದುಳಿನ ಸಮರ್ಪಕ ಕಾರ್ಯ ನಿರ್ವಹಣೆಗೆ ಮುಖ್ಯ ಶಕ್ತಿಮೂಲವಾಗಿರುವ ಕಾರ್ಬೊಹೈಡ್ರೇಟ್‌ಗಳಿಂದ ಶರೀರವನ್ನು ವಂಚಿಸುತ್ತದೆ. ಇದು ಮಿದುಳಿನ ಕಲಿಕೆ,ಆಲೋಚನೆ ಮತ್ತು ಜ್ಞಾಪಕ ಸಾಮರ್ಥ್ಯವನನ್ನು ಕುಂಠಿತಗೊಳಿಸುವ ಮೂಲಕ ಮಿದುಳಿಗೆ ಮಂಕು ಕವಿಯುವಂತೆ ಮಾಡುತ್ತದೆ.

* ಅತಿಸಾರ

ಯಾವಾಗಲೂ ಪ್ರೋಟಿನ್ ಸಮೃದ್ಧ ಆಹಾರಗಳನ್ನು ಆಯ್ಕೆ ಮಾಡುವುದು ನಾವು ನಾರನ್ನು ಸಮೃದ್ಧವಾಗಿ ಒಳಗೊಂಡಿರುವ ಆಹಾರವನ್ನು ಕಡೆಗಣಿಸುವಂತೆ ಮಾಡಬಹುದು. ಶರೀರದಲ್ಲಿ ನಾರಿನ ಕೊರತೆಯು ಕರುಳಿನ ಚಲನವಲನಗಳು ಮತ್ತು ಜೀರ್ಣಾಂಗದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಇದು ಹೆಚ್ಚಿನ ಸಂದರ್ಭಗಳಲ್ಲಿ,ವಿಶೇಷವಾಗಿ ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರಲ್ಲಿ ಅತಿಸಾರ ಸಮಸ್ಯೆಗೆ ಕಾರಣವಾಗುತ್ತದೆ.

* ಕ್ಯಾನ್ಸರ್

  ಮಾಂಸ,ಪೌಲ್ಟ್ರಿ ಉತ್ಪನ್ನಗಳು ಮತ್ತು ಮೀನಿನಂತಹ ಪ್ರೋಟಿನ್‌ಯುಕ್ತ ಆಹಾರಗಳನ್ನು ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸುವಾಗ ಪ್ರೋಟಿನ್ ಮೂಲಗಳಲ್ಲಿರುವ ಅಮಿನೊ ಆಮ್ಲಗಳು ಮತ್ತು ಕ್ರಿಯಾಟೈನ್ ನಡುವಿನ ರಾಸಾಯನಿಕ ಕ್ರಿಯೆಯಿಂದಾಗಿ ಹೆಟಿರೊಸೈಕ್ಲಿಕ್ ಅರೋಮ್ಯಾಟಿಕ್ ಅಮೈನ್ (ಎಚ್‌ಎಎ) ಎಂಬ ರಾಸಾಯನಿಕ ಸಂಯುಕ್ತವು ಉತ್ಪತ್ತಿಯಾಗುತ್ತದೆ. ಎಚ್‌ಎಎಗಳು ಸಾಮಾನ್ಯವಾಗಿ ಕ್ಯಾನ್ಸರ್‌ಕಾರಕಗಳಾಗಿದ್ದು ಸ್ತನ ಕ್ಯಾನ್ಸರ್,ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಕರುಳು-ಗುದನಾಳ ಕ್ಯಾನ್ಸರ್‌ಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಬಹುದು.

* ಯಕೃತ್ತಿಗೆ ಹಾನಿ

ಅತಿಯಾದ ಪ್ರೋಟಿನ್ ಸೇವನೆಯು ಯಕೃತ್ತಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳನ್ನುಂಟು ಮಾಡುತ್ತದೆ. ಯಕೃತ್ತಿನ ಕೋಶಗಳ ಉರಿಯೂತ ಅಥವಾ ಹಾನಿಯು ಹೆಚ್ಚಿನ ಪ್ರಕರಣಗಳಲ್ಲಿ ಅತಿಯಾದ ಪ್ರೋಟಿನ್ ಸೇವನೆಯೊಂದಿಗೆ ಗುರುತಿಸಿಕೊಂಡಿದೆ. ಅತಿಯಾಗಿ ಪ್ರೋಟಿನ್ ಬಳಸುವವರಲ್ಲಿ ಅಲ್ಬುಮಿನ್ ಮಟ್ಟವು ಹೆಚ್ಚಾಗಿರುತ್ತದೆ ಮತ್ತು ರಕ್ತದಲ್ಲಿ ಪ್ರಸರಣಗೊಳ್ಳುತ್ತದೆ,ಇದು ಯಕೃತ್ತಿನ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಯದ ಸೂಚನೆಯಾಗಿದೆ. ಇದು ಹೊಟ್ಟೆನೋವಿನಂತಹ ಲಕ್ಷಣಗಳನ್ನು ಪ್ರಕಟಿಸಬಹುದು.

*ಪರಿಧಮನಿ ಕಾಯಿಲೆ

 ಶರೀರದಲ್ಲಿ ಅತಿಯಾದ ಪ್ರೋಟಿನ್ ಪ್ರಮಾಣವು ಹೃದಯದಲ್ಲಿ ಉರಿಯೂತ ಮತ್ತು ಮೇದಸ್ಸು ಸಂಗ್ರಹಕ್ಕೆ ಕಾರಣವಾಗುತ್ತದೆ ಮತ್ತು ಪರಿಧಮನಿ ರೋಗವನ್ನುಂಟು ಮಾಡುತ್ತದೆ. ಅಲ್ಲದೆ ದೀರ್ಘಕಾಲ ಅತಿಯಾದ ಪ್ರೋಟಿನ್ ಸೇವನೆಯಿಂದ ಕರುಳಿನಲ್ಲಿ ಟ್ರೈಮಿಥೈಲಮೈನ್ ಎನ್-ಆಕ್ಸೈಡ್ ಎಂಬ ರಾಸಾಯನಿಕದ ಉತ್ಪತ್ತಿಯು ಹೆಚ್ಚುತ್ತದೆ ಮತ್ತು ಇದು ಹೃದ್ರೋಗಗಳನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News