×
Ad

ಉನ್ನತ ಶಿಕ್ಷಣಕ್ಕೆ 3000 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಮನವಿ: ಡಿಸಿಎಂ ಅಶ್ವಥ್ ನಾರಾಯಣ

Update: 2020-02-01 22:38 IST

ಬೆಂಗಳೂರು, ಫೆ.1: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಹೆಚ್ಚುವರಿ 3000 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ, ನೇತೃತ್ವದಲ್ಲಿ ಶನಿವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ಸದ್ಯ 4333 ಕೋಟಿ ರೂ. ಅನುದಾನ ಇದ್ದು, ಹೆಚ್ಚುವರಿ 3000 ಕೋಟಿ ರೂ.ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಬೇಡಿಕೆ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಬಜೆರ್ಟ್ ಪೂರ್ವ ಭಾವಿ ಸಭೆ ನಂತರ ಅವರು ಸುದ್ದಿಗಾರರಿಗೆ ತಿಳಿಸಿದರು.

ಸಂಶೋಧನಾ ನಿಧಿಗೆ ಬೇಡಿಕೆ, ಶಿಕ್ಷಕರ ತರಬೇತಿ, ತರಬೇತುದಾರರಿಗೆ ತರಬೇತಿ, ಹೊಸ ಬಿ.ಎಡ್ ಕಾರ್ಯಕ್ರಮ, 10 ಹೊಸ ಪದವಿ ಕಾಲೇಜು, 10 ಹೊಸ ಡಿಪ್ಲೊಮಾ ಕಾಲೇಜು, ಸರಕಾರಿ ಪದವಿ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ, ಕ್ರೀಡಾ ತರಬೇತಿ, ಫಿಟ್ ಇಂಡಿಯಾ ಯೋಜನೆ ಅನುಷ್ಠಾನ ಸೇರಿದಂತೆ ಪ್ರತಿ ಜಿಲ್ಲೆಗೂ ಹೊಸ ಬಿ.ಎಡ್ ಕಾಲೇಜು ಸ್ಥಾಪನೆ ಸಂಬಂಧ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಹಾಲಿ ಇರುವ ಪದವಿ ಕಾಲೇಜುಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಉದ್ದೇಶವಿದೆ. ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲು ಆಯಾ ಕಾಲೇಜುಗಳ ಬೇಡಿಕೆಗೆ ಅನುಗುಣವಾಗಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.

4 ವರ್ಷಗಳ ಏಕೀಕೃತ ಬಿ.ಎಡ್ ಕೋರ್ಸ್ ಆರಂಭಕ್ಕೆ ನ್ಯಾಷನಲ್ ಎಜುಕೇಷನ್ ಕೌನ್ಸಿಲ್‌ಗೆ ಮನವಿ ಸಲ್ಲಿಸುತ್ತೇವೆ. 2021ರ ಜೂನ್‌ನಿಂದ ಹೊಸ ಕೋರ್ಸ್ ಆರಂಭಿಸುವ ಉದ್ದೇಶವಿದೆ. ಜತಗೆ, ತಾಂತ್ರಿಕ ಸಮಿತಿಯ ಶಿಫಾರಸಿನ ಅನ್ವಯ ಡಿಪ್ಲೋಮಾ ಕೋರ್ಸ್‌ನಲ್ಲಿ ಸುಧಾರಣೆ ತರಲು ಉದ್ದೇಶಿಸಿದ್ದೇವೆ. ಪಠ್ಯಕ್ರಮ ಸರಳಗೊಳಿಸಿ, ಪರಿಣಾಮಕಾರಿಯಾದ ಕೋರ್ಸ್ ಪರಿಚಯಿಸಲು ಉದ್ದೇಶಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News