×
Ad

ಕೊರೊನಾ ವೈರಸ್‌ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್‌ಗಳ ಖರೀದಿಯ ಭರಾಟೆ

Update: 2020-02-01 22:58 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.1: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ವೈರಸ್‌ನಿಂದ ತಪ್ಪಿಸಿಕೊಳ್ಳಲು ಜನರು ಮಾಸ್ಕ್‌ಗಳ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ, ಸಿಲಿಕಾನ್ ಸಿಟಿಯಲ್ಲಿಯೂ ಮಾಸ್ಕ್‌ಗಳ ಖರೀದಿ ಅಧಿಕಗೊಂಡಿದೆ.

ರಾಜ್ಯದಲ್ಲಿ ಸೋಂಕು ಭೀತಿ ಇಲ್ಲ. ಆದರೆ ಪಕ್ಕದ ಕೇರಳದಲ್ಲಿ ಸೋಂಕು ಕಂಡು ಬಂದಿರುವುದರಿಂದ ಜನರು ಭಯಗೊಂಡಿದ್ದಾರೆ. ಕೊರೊನಾ ವೈರಸ್ ಸೋಂಕು ಇರುವ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ವೈರಸ್ ಹರಡುತ್ತದೆ. ಜನರು ಪ್ರತಿ ದಿನ ದಟ್ಟಣೆಯಿಂದ ಕೂಡಿರುವ ಸ್ಥಳಗಳಲ್ಲಿ ಓಡಾಡುವುದರಿಂದ ಸೋಂಕು ಹರಡುವುದು ಸುಲಭ. ಮುನ್ನೆಚ್ಚರಿಕೆ ಕ್ರಮವಾಗಿ ಅನೇಕರು ಮಾಸ್ಕ್ ಧರಿಸಲು ಆರಂಭಿಸಿದ್ದಾರೆ. ಕೆಮ್ಮುವವರು ಹಾಗೂ ಸೀನುವವರು ಮಾಸ್ಕ್ ಧರಿಸುವುದು ಉತ್ತಮ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಇದರಿಂದಾಗಿ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಮಳಿಗೆಗಳಲ್ಲಿ ಹಸಿರು ಬಣ್ಣದ ಮಾಸ್ಕ್ 5 ರೂ.ಗೆ ಲಭ್ಯವಿದೆ. ಇದಕ್ಕಿಂತ ಕಡಿಮೆ ದರದಲ್ಲೂ ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿ ವಾಯುಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಪಾದಚಾರಿಗಳು, ಬೈಕ್ ಸವಾರರು ಮಾಸ್ಕ್ ಬಳಸುತ್ತಿದ್ದಾರೆ. ಆದರೆ ಈಗ ಸೋಂಕಿನಿಂದ ತಪ್ಪಿಸಿಕೊಳ್ಳಲು ಬಳಕೆ ಆರಂಭವಾಗಿದೆ.

ಮೆಟ್ರೋದಲ್ಲಿಯೂ ಬಳಕೆ: ನಮ್ಮ ಮೆಟ್ರೋದಲ್ಲಿ ಪ್ರತಿ ದಿನ 3 ರಿಂದ 4 ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ದಟ್ಟಣೆಯಲ್ಲಿ ಪ್ರಯಾಣಿಸಬೇಕಿರುವುದರಿಂದ ಅನೇಕರು ಸೋಂಕಿನ ಭೀತಿಗೆ ಒಳಗಾಗಿದ್ದಾರೆ. ಅನೇಕ ಪ್ರಯಾಣಿಕರು ಮಾಸ್ಕ್ ಧರಿಸಿ ಪ್ರಯಾಣ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News