ಇಂಡಿಯಾ ಆನ್ ಫಿಲ್ಮ್

Update: 2020-02-02 06:10 GMT

ಡಿಸ್ಕವರಿ ಚಾನೆಲ್‌ನಲ್ಲಿ ಜನವರಿ 26ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ 100 ನಿಮಿಷಗಳ ಸಾಕ್ಷಚಿತ್ರ ‘ಇಂಡಿಯಾ ಆನ್ ಫಿಲ್ಮ್’ ಸಂಧ್ಯಾ ಸೂರಿಯವರ ಸಾಕ್ಷಚಿತ್ರ ‘ಅರೌಂಡ್ ಇಂಡಿಯಾ’ಕ್ಕೆ ಟಿಪ್ಪಣಿ ಸಹವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಎರಡೂ ಸಾಕ್ಷಚಿತ್ರಗಳು ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಿರ್ಮಾಣವಾಗಿರುವ ಬ್ರಿಟಿಷರ ಆಡಳಿತದಡಿಯ ಭಾರತದ ಕುರಿತಾದ ಸಿನೆಮಾಗಳ ಮೂಲವನ್ನು ಹೊಂದಿವೆ. ಸೂರಿಯವರ ಸಾಕ್ಷಚಿತ್ರವನ್ನು ಬಿಎಫ್‌ಐ ನೆರವಿನಿಂದ ನಿರ್ಮಿಸಲಾಗಿದ್ದರೆ ಇಂಡಿಯಾ ಆನ್ ಫಿಲ್ಮ್ ಸ್ವತಂತ್ರವಾಗಿ ನಿರ್ಮಾಣವಾಗಿರುವ ಸಾಕ್ಷಚಿತ್ರ. ಇದನ್ನು ಟಿವಿಯಲ್ಲಿ ಪ್ರಸಾರ ಮಾಡುವ ಮೊದಲು ಜನವರಿ 24ರಂದು ಮುಂಬೈಯ ಭಾವು ದಾಜಿಲಾಡ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

ಭಾರತದಲ್ಲಿ 1899ರಿಂದ 1947ರ ಅವಧಿಯಲ್ಲಿ ನಿರ್ಮಿಸಲಾದ ಸಾಕ್ಷಚಿತ್ರಗಳು, ವಾರ್ತಾಚಿತ್ರಗಳು, ಚಲನಚಿತ್ರಗಳ ಆಯ್ದ ದೃಶ್ಯಗಳನ್ನು ಹೆಣೆದು ಈ ಸಿನೆಮಾವನ್ನು ನಿರ್ಮಿಸಲಾಗಿದೆ.

ವಸಾಹತುಶಾಹಿ ಆಡಳಿತದಲ್ಲಿ ಅಧಿಕಾರಿಗಳ ದರ್ಪ, ಪ್ರಜೆಗಳೊಡನೆ ನಡೆದುಕೊಳ್ಳುವ ರೀತಿ ಈ ಬಗ್ಗೆ ಸಿನೆಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಭಾರತೀಯ ರಾಜಪ್ರಭುತ್ವದ ಆಡಂಬರ, ಜಾರ್ಜ್ ಕರ್ಝನ್‌ನ ದಿಲ್ಲಿ ದರ್ಬಾರ್‌ನ ಡೌಲು, ಡಂಭಾಚಾರ, ಸ್ಥಳೀಯ ರಾಜಮನೆತದವರೊಡನೆ ಬ್ರಿಟಿಷರು ಬೆರೆಯುವ ರಾಜವೈಭವದ ಚಹಾಕೂಟಗಳು, ರಸ್ತೆ ಬದಿಯ ತಮಾಷೆ, ವಿನೋದ, ಸಾಲ್ವೇಷನ್ ಆರ್ಮಿ(ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಚರ್ಚ್‌ನ ಒಂದು ವಿಭಾಗ) ಮಿಷನರಿಗಳ ಹಾಗೂ ಸ್ಥಳೀಯರ ನಡುವಿನ ಮುಖಾಮುಖಿ ಹೀಗೆ ಇಲ್ಲಿ ಬಳಸಿಕೊಳ್ಳಲಾದ ಬಹುತೇಕ ಬ್ರಿಟಿಷ್ ನಿರ್ಮಾಪಕರ ಸಿನೆಮಾದ ವಿಷಯ ವ್ಯಾಪ್ತಿ ಅಚ್ಚರಿದಾಯಕವಾಗಿದೆ.

ಸ್ವಾತಂತ್ರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಬ್ರಿಟಿಷರಿಗೆ ತಮ್ಮ ಹಲವು ವಸಾಹತುಗಳು ಕೈತಪ್ಪಿ ಹೋಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ಮಹಾತ್ಮಾ ಗಾಂಧೀಜಿ ದೇಶದೆಲ್ಲೆಡೆ ಸಂಚರಿಸಿದ ಕುರಿತ ಸಿನೆಮಾವಿದೆ. 1947ರಲ್ಲಿ ಸ್ವಾತಂತ್ರದ ಜೊತೆಗೇ ದೇಶ ವಿಭಜನೆಯಾದ ಸಂದರ್ಭದ ಘೋರ ಪರಿಸ್ಥಿತಿಯ ಚಿತ್ರಣವೂ ಸಿನೆಮಾದಲ್ಲಿದೆ. ಬ್ರಿಟಿಷ್ ಮಹಿಳೆಯರನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿಸುವಾಗ ಹಳ್ಳಿಯ ಜನತೆ ಹಲ್ಲು ಕಿಸಿಯುವ ದೃಶ್ಯವೂ ಸಿನೆಮಾದಲ್ಲಿದೆ.

ಇಂಡಿಯಾ ಆನ್ ಫಿಲ್ಮ್‌ಗೆ ರಾಹುಲ್ ಬೋಸ್ ಧ್ವನಿ ನೀಡಿದ್ದಾರೆ. ಶೀರ್ಷಿಕೆಯ ಘೋಷಣೆ ‘ ಭಾರತ, ಬಿಲಿಯನ್ ಜನತೆಯ ನಾಡು’ ಎಂಬ ನುಡಿಯೊಂದಿಗೆ ಸಿನೆಮಾದ ಘಟನೆಗಳಿಗೆ ಚಾಲನೆ ನೀಡಿದ್ದಾರೆ ಬೋಸ್. ಇದರೊಂದಿಗಿನ ದೃಶ್ಯ ತುಣುಕುಗಳು ಹಾಗೂ ವೀಕ್ಷಕ ವಿವರಣೆಯ ಮಧ್ಯೆ ಈ ಕಾಲದ ಸಾಮಾನ್ಯ ಭಾರತೀಯ ಪ್ರಜೆಯೊಬ್ಬ ಪರದೆಯ ಮೇಲೆ ಮೂಡುವ ಸಿನೆಮಾವನ್ನು ವೀಕ್ಷಿಸುವ ದೃಶ್ಯ ಬರುತ್ತದೆ. ಇಲ್ಲಿ ವೀಕ್ಷಕರು ಯಾವ ಸಿನೆಮಾ ನೋಡುತ್ತಿದ್ದಾರೆ ಮತ್ತು ಅವರ ಭಾವನೆಗಳೇನು ಎಂಬುದನ್ನು ದಾಖಲಿಸಿಕೊಂಡಿಲ್ಲ. ಅವರ ಪ್ರತಿಕ್ರಿಯೆಯ ಬಗ್ಗೆಯೇ ಒಂದು ಪ್ರತ್ಯೇಕ ಸಿನೆಮಾ ಮಾಡಬಹುದಿತ್ತು. ಇಂಡಿಯಾ ಆನ್ ಫಿಲ್ಮ್ ಸಿನೆಮಾದಲ್ಲಿ ತಜ್ಞರನ್ನು ಹೊರತುಪಡಿಸಿ ಕೇಳಿಬರುವ ಸ್ವರವೆಂದರೆ- ಲ್ಯಾಪ್‌ಟಾಪ್‌ನಲ್ಲಿ ದೃಶ್ಯದ ತುಣುಕುಗಳನ್ನು ವೀಕ್ಷಿಸುತ್ತಿರುವ ಮೂವರು ಯುವಜನತೆ ಹೊರಡಿಸುವ ಉದ್ಗಾರವಾಗಿದೆ.

ಇಲ್ಲಿ ತಜ್ಞರಲ್ಲಿ ಸುನಿಲ್ ಖಿಲ್ನಾನಿ ಮತ್ತು ವಿಲಿಯಂ ಡಾರ್ಲಿಂಪ್ಲೆ ನಿರಂತರ ಒಳನೋಟಗಳನ್ನು ಒದಗಿಸಿದ್ದಾರೆ. ಬ್ರಿಟಿಷರ ಹಡಗಿಗೆ ಬಳಕೆಯಾಗುವ ಸೆಣಬಿನ ಹಗ್ಗ ತಯಾರಿಸುವ ಕುರಿತು 1909ರಲ್ಲಿ ನಿರ್ಮಾಣವಾದ ಸಿನೆಮಾದಲ್ಲಿ , ಬ್ರಿಟಿಷರಿಗೆ ಭಾರತದಲ್ಲಿ ಮತ್ತು ಸ್ವದೇಶದಲ್ಲಿ ಐಷಾರಾಮಿ ಬದುಕು ಜೀವಿಸಲು ಯಾವ ರೀತಿ ಭಾರತೀಯ ಕಾರ್ಮಿಕರು ಕೊಡುಗೆ ನೀಡಿದ್ದರು ಎಂಬುದಕ್ಕೆ ಉದಾಹರಣೆಯಿದೆ ಎಂದು ಖಿಲ್ನಾನಿ ಗಮನ ಸೆಳೆದಿದ್ದಾರೆ. ಬಿಮಲ್ ರಾಯ್ ಅವರ ಸಿನೆಮಾ ‘ಟಿನ್ಸ್ ಆಫ್ ಇಂಡಿಯಾ’ದಲ್ಲಿ ಭಾರತೀಯ ಕಾರ್ಮಿಕರನ್ನು ತೈಲ ತುಂಬಿಸುವ ಡಬ್ಬಿಗಳ ಉತ್ಪಾದನೆಯ ಕಾರ್ಖಾನೆಯಲ್ಲಿ ದುಡಿಸಿಕೊಳ್ಳುವ ಚಿತ್ರಣವೂ ಭಾರತದ ಸ್ವಾತಂತ್ರದ ಬಳಿಕ ನಡೆದ ಕೈಗಾರೀಕರಣ ಪ್ರಕ್ರಿಯೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ.

ಭಾರತೀಯರ ಬಗೆಗಿನ ಬ್ರಿಟಿಷ್ ವೈಸ್‌ರಾಯ್‌ಗಳ ಪೂರ್ವಾಗ್ರಹದ ದೃಶ್ಯದ ಜೊತೆಗೇ, ಅಪರೂಪದ ಮೃದುತ್ವ ಕ್ಷಣಗಳ ಚಿತ್ರಣವೂ ಇದೆ. ಚಹಾ ಕೂಟದಲ್ಲಿ ವೈಸ್‌ರಾಯ್‌ಯ ಆನಂದದ ಕ್ಷಣಗಳು, ಪುರಿಯ ಬೀಚ್‌ನಲ್ಲಿ ಬ್ರಿಟಿಷ್ ಅಧಿಕಾರಿಗಳ ಪಿಕ್‌ನಿಕ್ ಇತ್ಯಾದಿಗಳು ವಸಾಹತಿನಲ್ಲಿ ಜೀವನದ ಸಂಕೀರ್ಣ ಅನುಭವವನ್ನು ಸೂಚಿಸುತ್ತದೆ. ನಮ್ಮನ್ನು ನೋಡುತ್ತಿರುವವರನ್ನು ನಾವು ಹೇಗೆ ನೋಡುತ್ತಿದ್ದೇವೆ ಮತ್ತು ಹೀಗೆ ನೋಡುವ ಕ್ರಿಯೆಯ ಬಗ್ಗೆ ನಾವು ಏನು ಹೇಳಬೇಕು ಎಂಬುದಕ್ಕೆ ಮಹತ್ವ ನೀಡಿದ್ದು ಹಲವಾರು ಗಮನ ಸೆಳೆಯುವ ದೃಶ್ಯಗಳು ಆಗಾಗ ಹಾದುಹೋಗುತ್ತವೆ. ಕಡಿಮೆ ಅವಸರದ ಮತ್ತು ಒಳನೋಟವಿರುವ ನಿಲುವು ಸಾಕ್ಷಚಿತ್ರಕ್ಕೆ ಅಗತ್ಯವಿತ್ತು. ಅಂತಿಮವಾಗಿ ಸಿನೆಮಾದ ಬಗ್ಗೆ ಉಳಿಯುವ ನೆನಪೆಂದರೆ ಹೆಚ್ಚು ದೃಶ್ಯ ಮತ್ತು ಕಡಿಮೆ ಮಾತು.

ಕೃಪೆ: scroll.in

Writer - ನಂದಿನಿ ರಾಮನಾಥ್

contributor

Editor - ನಂದಿನಿ ರಾಮನಾಥ್

contributor

Similar News