ಕನ್ಹಯ್ಯ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ

Update: 2020-02-02 18:21 GMT

ಪಾಟ್ನಾ, ಫೆ. 2: ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಬಿಹಾರ್‌ನ ಸರಣ್ ಜಿಲ್ಲೆಯಲ್ಲಿ ಶನಿವಾರ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಈ ಘಟನೆಯಲ್ಲಿ ಕನ್ಹಯ್ಯ ಕುಮಾರ್ ಅವರ ಬೆಂಗಾವಲು ವಾಹನದ ಕಿಟಕಿ ಗಾಜುಗಳು ಒಡೆದಿವೆ. ಓರ್ವ ವ್ಯಕ್ತಿಯ ಕೈಗೆ ಗಾಯಗಳಾಗಿವೆ. ಆದರೆ, ಕನ್ಹಯ್ಯ ಕುಮಾರ್ ಅವರು ಅಪಾಯದಿಂದ ಪಾರಾಗಿದ್ದಾರೆ.

ಕೊಪಾ ಛಟ್ಟಿ ಗ್ರಾಮದಲ್ಲಿ ಸಂಭವಿಸಿದ ಘಟನೆಯಲ್ಲಿ 12 ಬೆಂಗಾವಲು ವಾಹನಗಳಲ್ಲಿ ಎರಡು ಬೆಂಗಾವಲು ವಾಹನಗಳಿಗೆ ಹಾನಿಯಾಗಿವೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ವಿರೋಧಿ ಯಾತ್ರೆಯ ನೇತೃತ್ವ ವಹಿಸಿರುವ ಕನ್ಹಯ್ಯ ಕುಮಾರ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಲು ರಾಜ್ಯದ ಪಶ್ಚಿಮ ಚಂಪಾರಣ್‌ನ ಭಿಟಿಪಾರ್ವಾ ಆಶ್ರಮದಿಂದ ಛಾಪಾಕ್ಕೆ ಬೆಂಗಾವಲು ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಈ ಯಾತ್ರೆ ಫೆಬ್ರವರಿ 29ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಅಂತ್ಯಗೊಳ್ಳಲಿದೆ.

ಕಲ್ಲು ತೂರಾಟ ನಡೆಸಿ ಪೌರತ್ವ ತಿದ್ದುಪಡಿ ಪರ ಘೋಷಣೆಗಳನ್ನು ಕೂಗಿದ ದಾಳಿಕೋರರನ್ನು ಕನ್ಹಯ್ಯ ಕುಮಾರ್ ಅವರಿಗೆ ರಕ್ಷಣೆ ನೀಡಲು ನಿಯೋಜಿಸಿದ್ದ ಪೊಲೀಸರು ಅಟ್ಟಿಸಿಕೊಂಡು ಹೋದರು ಎಂದು ಛಾಪ್ರಾ ಸದಾರ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಹೇಳಿದ್ದಾರೆ.

ಇದಕ್ಕಿಂತ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಸಿವಾನ್ ಜನತಾ ದಳ (ಸಂಯುಕ್ತ) ಸಂಸದೆ ಕವಿತಾ ಸಿಂಗ್ ಅವರ ಪತಿ ಅಜಯ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News