ಬೀದರ್ ನಲ್ಲಿ ಶಾಲಾ ನಾಟಕಕ್ಕಾಗಿ ಪೋಷಕರು, ಶಿಕ್ಷಕಿ ವಿರುದ್ಧ ದೇಶದ್ರೋಹ ಪ್ರಕರಣ ಅಸಂಬದ್ಧ ಮತ್ತು ಕಾನೂನುಬಾಹಿರ

Update: 2020-02-03 11:34 GMT
ಫೋಟೊ ಕೃಪೆ: twitter

ಬೀದರ್ ನ ಶಾಹಿನ್ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ಆರು ದಿನಗಳಲ್ಲಿ ಮೂರು ಸಲ ಪೊಲೀಸರ ವಿಚಾರಣೆಗೊಳಗಾಗಿದ್ದಾರೆ. ಶಾಲೆಯಲ್ಲಿ ಮಕ್ಕಳು ಪ್ರದರ್ಶಿಸಿದ್ದ ನಾಟಕವೊಂದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೋರ್ವನ ತಾಯಿ ಮತ್ತು ಮುಖ್ಯ ಶಿಕ್ಷಕಿಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ನಾಟಕವು ಪೌರತ್ವ (ತಿದ್ದುಪಡಿ) ಕಾಯ್ದೆ( ಸಿಎಎ)ಯನ್ನು ಟೀಕಿಸಿತ್ತು ಎನ್ನುವುದು ಪೊಲೀಸರ ಹೇಳಿಕೆ. ನಾಟಕವನ್ನು ರೂಪಿಸುವುದರಲ್ಲಿ ವಿದ್ಯಾರ್ಥಿಯ ತಾಯಿ ಮತ್ತು ಮುಖ್ಯ ಶಿಕ್ಷಕಿ ಭಾಗಿಯಾಗಿದ್ದರು ಎನ್ನುವುದು ಪೊಲೀಸರ ಆರೋಪ. ಇದೇ ವೇಳೆ ಶಾಲೆಯ ಆವರಣದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ್ದಕ್ಕಾಗಿ ಆಡಳಿತ ವರ್ಗದ ವಿರುದ್ಧವೂ ಪ್ರಕರಣ ದಾಖಲಾಗಿದೆ.

ನಾಟಕದಲ್ಲಿ ಪಾತ್ರ ವಹಿಸಿದ್ದ ವಿದ್ಯಾರ್ಥಿ ತನ್ನ ಸಂಭಾಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರು ಈ ಕ್ರಮವನ್ನು ಕೈಗೊಂಡಿರುವಂತಿದೆ.

ನಾಟಕದಲ್ಲಿ ಪ್ರಧಾನಿಯವರನ್ನು ಅವಮಾನಿಸುವಂಥದ್ದೇನೂ ಇರಲಿಲ್ಲ ಎಂದು ಪ್ರತಿಪಾದಿಸಿರುವ ಶಾಲೆಯು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕುರಿತು ಮುಸ್ಲಿಮರಲ್ಲಿಯ ಕಳವಳಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ನಾಟಕದ ಉದ್ದೇಶವಾಗಿತ್ತು ಎಂದು ಹೇಳಿದೆ. ಆದರೆ ಸಂಘಪರಿವಾರ ಕಾರ್ಯಕರ್ತನೋರ್ವನ ದೂರಿನ ಮೇರೆಗೆ ಪೊಲೀಸರು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.

ಪ್ರಕರಣವು ದೇಶದ್ರೋಹ ಕಾನೂನಿನ ಸ್ಪಷ್ಟ ದುರುಪಯೋಗವಾಗಿರುವ ಜೊತೆಗೆ ಪೊಲೀಸರು ಮಕ್ಕಳೊಂದಿಗೆ ಕೀಳಾಗಿ ನಡೆದುಕೊಂಡಿದ್ದಾರೆ. ಮಕ್ಕಳ ವಿಚಾರಣೆಯ ಸಂದರ್ಭದಲ್ಲಿ ಅನುಸರಿಸಲಾಗುವ ಸಾಮಾನ್ಯ ಪದ್ಧತಿಗಳನ್ನು ಉಲ್ಲಂಘಿಸಿ ಅವರು ತಮ್ಮ ಹೆತ್ತವರು ಮತ್ತು ಶಿಕ್ಷಕರನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ.

ದೇಶದ್ರೋಹ ಕಾನೂನಿನ ದುರುಪಯೋಗ

ದೇಶದ್ರೋಹ ಕಾನೂನಿನ ದುರುಪಯೋಗದ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ದಶಕಗಳಿಂದಲೂ ಪದೇ ಪದೇ ನೀಡುತ್ತಾ ಬಂದಿರುವ ಎಚ್ಚರಿಕೆಗಳಿಗೆ ಕರ್ನಾಟಕದ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂಬಂತಿದೆ. ಶುಕ್ರವಾರವೂ ಸರ್ವೋಚ್ಚ ನ್ಯಾಯಾಲಯವು ‘ದೇಶದ್ರೋಹ ಮತ್ತು ದೇಶವಿರೋಧಿ’ ಪದಗಳು ಹಗುರವಾಗಿ ಬಳಕೆಯಾಗುತ್ತಿರುವ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

 ಆರೋಪಿಯ ಕೃತ್ಯ ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುತ್ತಿದ್ದರೆ ಮಾತ್ರ ಆತನ/ಆಕೆಯ ವಿರುದ್ಧ ದೇಶದ್ರೋಹದ ಗಂಭೀರ ಆರೋಪವನ್ನು ಹೊರಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯದ ಹಲವಾರು ತೀರ್ಪುಗಳು ಸ್ಪಷ್ಟಪಡಿಸಿವೆ. ಕೇವಲ ಸರಕಾರದ ಟೀಕೆ ಅಥವಾ ಸರಕಾರವನ್ನು ನಡೆಸುತ್ತಿರುವವರ ವಿರುದ್ಧ ಕಟುವಾದ ಭಾಷೆಯ ಬಳಕೆಯನ್ನು ದೇಶದ್ರೋಹವೆಂದು ಪರಿಗಣಿಸುವಂತಿಲ್ಲ.

ಆದರೆ ಇದನ್ನೇ ಕರ್ನಾಟಕದ ಪೊಲೀಸರು ಮಾಡಿದ್ದಾರೆ. ನಾಟಕದ ಕೆಲವು ಭಾಗಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ನಾಟಕದಲ್ಲಿ ಮಗುವೊಂದು ‘ಪ್ರಧಾನಿ ಮೋದಿಯವರನ್ನು ಚಪ್ಪಲಿಗಳಿಂದ ಥಳಿಸಬೇಕು’ ಎಂದು ಹೇಳಿದೆ ಎಂದು ಆರೋಪಿಸಲಾಗಿತ್ತು. ಆದರೆ ಹಲವು ಮಾಧ್ಯಮ ವರದಿಗಳು ಈ ಆರೋಪವನ್ನು ಅಲ್ಲಗಳೆದಿವೆ. ಪೌರತ್ವವನ್ನು ಸಿದ್ಧಪಡಿಸಲು ದಾಖಲೆಗಳನ್ನು ಕೇಳುವ ಯಾರನ್ನೇ ಆದರೂ ಚಪ್ಪಲಿಗಳಿಂದ ಥಳಿಸಬೇಕು ಎಂಬ ಸಾರ್ವತ್ರಿಕ ಹೇಳಿಕೆಯನ್ನು ನಾಟಕದಲ್ಲಿ ಪಾತ್ರ ವಹಿಸಿದ್ದ ಮಗು ನೀಡಿದ್ದಂತೆ ಕಂಡು ಬರುತ್ತಿದೆ. ಈ ಮಾತು ಯಾವುದೇ ರೀತಿಯಲ್ಲಿ ದೇಶದ್ರೋಹದ ಭಾವನೆಗಳನ್ನು ಪ್ರಚೋದಿಸುವುದಿಲ್ಲ. ಅಲ್ಲದೆ ನಾಟಕದ ಪರಿಣಾಮವಾಗಿ ಯಾವುದೇ ಹಿಂಸಾಚಾರವೂ ನಡೆದಿಲ್ಲ. ದೇಶದ್ರೋಹದ ಜೊತೆಗೆ ಶಿಕ್ಷಕಿ ಮತ್ತು ವಿದ್ಯಾರ್ಥಿಯ ತಾಯಿ ನಾಟಕವನ್ನು ಪ್ರದರ್ಶಿಸುವ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದೂ ಪೊಲೀಸರು ಆರೋಪಿಸಿದ್ದಾರೆ. ಇದು ಎಲ್ಲ ಹಿಂದುಗಳು ಸಿಎಎಯನ್ನು ಬೆಂಬಲಿಸುತ್ತಿದ್ದಾರೆ ಮತ್ತು ಎಲ್ಲ ಮುಸ್ಲಿಮರು ಅದನ್ನು ವಿರೋಧಿಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಆಧರಿಸಿದೆ. ಸಿಎಎ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು ಎಲ್ಲ ಸಮುದಾಯಗಳ ಜನರೂ ಅದನ್ನು ವಿರೋಧಿಸುತ್ತಿದ್ದಾರೆ ಎನ್ನುವುದನ್ನು ಬೆಟ್ಟು ಮಾಡುತ್ತಿವೆ.

ಮಕ್ಕಳ ವಿಚಾರಣೆ

ರವಿವಾರದೊಳಗೆ ಪೊಲೀಸರು ಮಕ್ಕಳನ್ನು ಮೂರು ಸಲ ವಿಚಾರಣೆಗೊಳಪಡಿಸಿದ್ದಾರೆ. ಈ ರೀತಿ ಬೆದರಿಕೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಕೌಟುಂಬಿಕ ಕಾನೂನು ತಜ್ಞೆ ಸುಧಾ ರಾಮಲಿಂಗಂ ಅವರು ಹೇಳುವಂತೆ ಮಕ್ಕಳ ವಿಚಾರಣೆಯು ಅಪರಾಧವೊಂದನ್ನು ಭೇದಿಸಲು ನೆರವಾಗುತ್ತದೆ ಎಂದಿದ್ದರೆ ಹಾಗೆ ಮಾಡಲು ಪೊಲೀಸರಿಗೆ ಹಕ್ಕು ಇದೆ ಮತ್ತು ಇದಕ್ಕಾಗಿ ಕೆಲವು ಪ್ರಕ್ರಿಯೆಗಳನ್ನು ಅವರು ಪಾಲಿಸಬೇಕಾಗುತ್ತದೆ.

 ಉದಾಹರಣೆಗೆ ಮಕ್ಕಳನ್ನು ಹೆತ್ತವರ ಉಪಸ್ಥಿತಿಯಲ್ಲಿ ಪ್ರಶ್ನಿಸಬೇಕು. ಆದರೆ ಈ ಪ್ರಕರಣದಲ್ಲಿ ಮಕ್ಕಳನ್ನು ಅವರು ತಮ್ಮ ಹೆತ್ತವರು ಮತ್ತು ಶಿಕ್ಷಕರ ಮೇಲೆ ಆರೋಪ ಹೊರಿಸಲು ಬಳಸಲಾಗುತ್ತಿರುವುದು ದೇಶದ್ರೋಹ ಕಾನೂನಿನ ಸ್ಪಷ್ಟ ದುರುಪಯೋಗವಾಗಿದೆ. ಪೊಲೀಸರು ದುಡುಕಿನ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದೂ ರಾಮಲಿಂಗಂ ಹೇಳಿದರು.

  ಮಕ್ಕಳನ್ನು ವಿಚಾರಣೆಗೊಳಪಡಿಸುವುದನ್ನು ವಿಶ್ವಾದ್ಯಂತ ಸೂಕ್ಷ್ಮವಿಷಯವೆಂದು ಪರಿಗಣಿಸಲಾಗಿದೆ ಮತ್ತು ಮಗುವು ಯಾವುದೇ ಭಾವನಾತ್ಮಕ ಆಘಾತಕ್ಕೆ ಒಳಗಾಗದಂತೆ ಅದಕ್ಕೆ ಹಿತಕರವಾದ ಪೂರಕ ವಾತಾವರಣದಲ್ಲಿ ವಿಚಾರಣೆ ನಡೆಸುವುದು ಅಗತ್ಯವಾಗಿದೆ. ಉದಾಹರಣೆಗೆ ಮಹಾರಾಷ್ಟ್ರ ಪೊಲೀಸ್ ಕೈಪಿಡಿಯಲ್ಲಿ 15 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳನ್ನು ಅವರ ಮನೆಯಲ್ಲಿಯೇ ಪ್ರಶ್ನಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಬೀದರ್ ಪೋಲಿಸರು ಮಕ್ಕಳ ವಿಚಾರಣೆಯನ್ನು ಶಾಲೆಯಲ್ಲಿ ನಡೆಸುತ್ತಿದ್ದಾರೆ.

ಸಾಕ್ಷ ಕಾಯ್ದೆಯ ಕಲಂ 118ರಡಿ ಓರ್ವ ವ್ಯಕ್ತಿಯನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಆತ ತನಗೆ ಕೇಳಲಾದ ಪ್ರಶ್ನೆಗಳನ್ನು ಮತ್ತು ಅವುಗಳ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಸಮರ್ಥನಾಗಿರಬೇಕು ಹಾಗೂ ತರ್ಕಬದ್ಧ ಉತ್ತರಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು. ಅಂದ ಹಾಗೆ ಬೀದರ್ ಪೊಲೀಸರು ಪ್ರಶ್ನಿಸಿರುವ ಮಕ್ಕಳಲ್ಲಿ ಅತ್ಯಂತ ಕಿರಿಯವನ ವಯಸ್ಸು ಕೇವಲ ಒಂಭತ್ತು ವರ್ಷ!

 ಇಂತಹ ಬೆದರಿಕೆಯು ಮಕ್ಕಳಲ್ಲಿ ಭಾವನಾತ್ಮಕ ಭೀತಿಯನ್ನು ಮೂಡಿಸುತ್ತದೆ. ತನ್ನ ಹೇಳಿಕೆಗಳು ತನ್ನ ತಾಯಿಯನ್ನು ಜೈಲಿಗೆ ಕಳುಹಿಸಲು ಕಾರಣವಾಗಿವೆ ಎನ್ನುವುದನ್ನು ಮಗುವು ಅರ್ಥ ಮಾಡಿಕೊಂಡಾಗ ಅದರ ಮಾನಸಿಕ ಸ್ಥಿತಿ ಏನಾಗಬಹುದು ಎನ್ನುವುದನ್ನು ಊಹಿಸಿಕೊಳ್ಳಿ ಎಂದು ರಾಮಲಿಂಗಂ ಹೇಳಿದರು.

Writer - ಶ್ರುತಿಸಾಗರ ಯಮುನನ್, scroll.in

contributor

Editor - ಶ್ರುತಿಸಾಗರ ಯಮುನನ್, scroll.in

contributor

Similar News