ನಿತ್ಯಾನಂದ ಜಾಮೀನು ರದ್ದು ಕೋರಿ ಅರ್ಜಿ: ವಿಚಾರಣೆ ಪೂರ್ಣ- ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2020-02-03 17:53 GMT

ಬೆಂಗಳೂರು, ಫೆ.3: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ನೀಡಿರುವ ಜಾಮೀನು ರದ್ದು ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು. 

ಈ ಕುರಿತು ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಲೆನಿನ್ ಪರ ವಾದಿಸಿದ ವಕೀಲರು, ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿತ್ತು. ಆದರೆ, ಜಾಮೀನು ಷರತ್ತು ಉಲ್ಲಂಘಿಸಿರುವ ಅವರು, ಕೋರ್ಟ್ ವಿಚಾರಣೆಗೆ ಹಾಜರಾಗುತ್ತಿಲ್ಲ. ಅವಧಿ ಮುಗಿದಿರುವ ಪಾಸ್ಪೋರ್ಟ್ ಅಡಿ ದೇಶ ತೊರೆದಿದ್ದಾರೆ. ಆದರೆ ಭಾರತದಲ್ಲಿರುವಂತೆ ವಿನಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಬೆಲ್ಲೀಸ್ ದೇಶದ ಪಾಸ್‌ಪೋರ್ಟ್ ಪಡೆದು ದೇಶ ಬಿಟ್ಟಿದ್ದಾನೆ. ಹೀಗಾಗಿ, ಜಾಮೀನು ರದ್ದುಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ವಕೀಲರು, ಸಮನ್ಸ್ ಜಾರಿಯಾದ ನಂತರ ವಿಚಾರಣೆ ಸಾಧ್ಯವಿದೆ. ಸದ್ಯದ ವಿಚಾರಣೆಗೆ ನಿತ್ಯಾನಂದನ ಅಗತ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸಮನ್ಸ್ ಜಾರಿಯಾಗುವವರೆಗೂ ವಿಚಾರಣೆಗೆ ಕಾಯಲಾಗದು ಎಂದು ಅಭಿಪ್ರಾಯಪಟ್ಟು, ಆದೇಶವನ್ನು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News