ಶಾಹೀನ್ ಬಾಗ್‌ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಮಹಿಳೆಯರ ಧರಣಿ

Update: 2020-02-04 16:54 GMT

ಬೆಂಗಳೂರು, ಫೆ.4: ಸಿಎಎ, ಎನ್‌ಆರ್‌ಸಿ ವಿರೋಧಿಸಿ ಹೊಸದಿಲ್ಲಿಯ ಶಾಹೀನ್ ಬಾಗ್ ಮೈದಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ಸದಸ್ಯರು ಮಂಗಳವಾರ ಧರಣಿ ನಡೆಸಿದರು.

ಇಲ್ಲಿನ ಪುರಭವನ ಮುಂಭಾಗ ಜಮಾಯಿಸಿದ ಎಐಎಂಎಸ್‌ಎಸ್ ಸದಸ್ಯರು, ಈ ಕೂಡಲೇ ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆಗಳಿಗೆ ತಡೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಭಾರತವನ್ನು ದೇಶದ ಪ್ರಜೆಗಳೇ ಆಳಬೇಕು. ಸಾಮ್ರಾಜ್ಯಶಾಹಿಗಳು ದೇಶಬಿಟ್ಟು ಹೋಗಬೇಕು. ಬಂಡವಾಳಶಾಹಿಗಳನ್ನು ತೊಲಗಿಸಬೇಕು. ರೈತರಪರ, ಕಾರ್ಮಿಕರ ಪರ ಹೀಗೆ ಜನಪರ ಇರುವವರು ಆಡಳಿತ ನಡೆಸಬೇಕು ಎಂಬುದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ, ಪ್ರಾಣ ತ್ಯಾಗ ಮಾಡಿದವರ ಕನಸಾಗಿತ್ತು. ಕೊನೆಗೂ ಸಾಮ್ರಾಜ್ಯಶಾಹಿಗಳು ಹೋಗುವ ಮೂಲಕ ಸ್ವಾತಂತ್ರ್ಯ ಬಂತು. ಆದರೆ ಜನಪರ ಇರುವವರ ಕೈಗೆ ಅಧಿಕಾರ ಸಿಗದೇ ಬಂಡವಾಳಶಾಹಿಗಳ ಕೈಗೆ ಅಧಿಕಾರ ಸಿಕ್ಕಿತು. ಇದರ ಪರಿಣಾಮವಾಗಿ 70 ವರ್ಷ ದಾಟಿದರೂ ಇನ್ನೂ ಒಪ್ಪತ್ತಿಗೆ ಊಟ ಇಲ್ಲದ, ಶಿಕ್ಷಣ ಸಿಗದ, ಉದ್ಯೋಗ ಇಲ್ಲದ, ಸೂರು ಇಲ್ಲದ ಕೋಟ್ಯಂತರ ಜನ ಇದ್ದಾರೆ ಎಂದು ಧರಣಿ ನಿರತ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಸರ್ವ ಜನಾಂಗದ ಶಾಂತಿಯುತ ದೇಶ ನಮ್ಮದು. ಕೇಂದ್ರ ಸರಕಾರ ಕಾಯ್ದೆ ತರುವ ಮೂಲಕ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಹೊರಟಿದೆ ಎಂದು ಮಹಿಳೆಯರು ಆರೋಪಿಸಿದರು.

ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ವಕೀಲರು, ಉದ್ಯಮಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಅಷ್ಟಾದರೂ ಕೇಂದ್ರ ಸರಕಾರ ಕಾಯ್ದೆಯನ್ನು ಹಿಂಪಡೆಯುತ್ತಿಲ್ಲ. ಇದರ ಹಿಂದೆ ದೇಶವನ್ನು ಒಡೆದು ಆಳುವ ವ್ಯವಸ್ಥಿತ ಸಂಚು ಇರುವಂತೆ ಕಾಣುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕವಯತ್ರಿ ಮಮತಾ ಸಾಗರ್, ನ್ಯಾಯವಾದಿ ಶೀಲಾ ಎಸ್.ರಾವ್, ಡಾ.ಮೇರಿ ಜಾನ್, ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿಗಳಾದ ಕೆ.ಉಮಾ, ಎಸ್.ಶೋಭ, ಶಾಂತ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News