ಪೌರತ್ವ ಕಾಯ್ದೆ ಮುಸ್ಲಿಮರಿಗೆ ತೊಂದರೆ ನೀಡುವುದಿಲ್ಲ: ರಜನೀಕಾಂತ್

Update: 2020-02-05 06:59 GMT

ಚೆನ್ನೈ, ಫೆ.5: ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಮುಸ್ಲಿಂ ಸಮುದಾಯಕ್ಕೆ ಬೆದರಿಕೆಯಾಗಿ ಪರಿಣಮಿಸದು. ಒಂದು ವೇಳೆ ಇದರಿಂದ ಮುಸ್ಲಿಮರು ತೊಂದರೆ ಎದುರಿಸಿದರೆ ಅದರ ವಿರುದ್ಧ ಮೊದಲಿಗೆ ನಾನೇ ಧ್ವನಿ ಎತ್ತುತ್ತೇನೆ ಎಂದು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ರಜನೀಕಾಂತ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಜನೀಕಾಂತ್ ಈ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್)ಅಗತ್ಯವಿದೆ ಎಂದು ರಜನೀಕಾಂತ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

‘‘ಸಿಎಎ ಮುಸ್ಲಿಂ ಸಮುದಾಯಕ್ಕೆ ತೊಂದರೆ ನೀಡುವುದಿಲ್ಲ. ಒಂದು ವೇಳೆ ಅವರು ತೊಂದರೆ ಎದುರಿಸಿದರೆ, ನಾನು ಅವರ ಪರವಾಗಿ ಮೊದಲಿಗೆ ಧ್ವನಿ ಎತ್ತುತ್ತೇನೆ’’ ಎಂದು ರಜನಿ ಹೇಳಿದ್ದಾರೆ.

 ಕಳೆದ ಕೆಲವು ಸಮಯದಿಂದ ರಜನೀಕಾಂತ್ ರಾಜಕೀಯ ರಂಗಕ್ಕೆ ಧುಮುಕುತ್ತಾರೆಂಬ ಮಾತು ಕೇಳಿಬರುತ್ತಿದೆ. ಮುಂದಿನ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮೊದಲು ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಬಹುದು.

ವಿಷಯವನ್ನು ಅವಲೋಕಿಸಿ, ತಮ್ಮ ಪ್ರಾಧ್ಯಾಪಕರ ಜೊತೆಗೆ ಚರ್ಚಿಸಿದ ಬಳಿಕವಷ್ಟೇ ಪ್ರತಿಭಟನೆ ಹಮ್ಮಿಕೊಳ್ಳಬೇಕೆಂದು ರಜನೀಕಾಂತ್ ವಿದ್ಯಾರ್ಥಿ ಬಳಗವನ್ನು ವಿನಂತಿಸಿಕೊಂಡರು.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ದೇಶವ್ಯಾಪಿ ಹಿಂಸಾಚಾರ ಘಟನೆ ನಡೆಯುತ್ತಿರುವ ಕುರಿತು ಡಿಸೆಂಬರ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದ ರಜನೀಕಾಂತ್, ಹಿಂಸಾಚಾರ ಹಾಗೂ ದಂಗೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ದೇಶದ ಜನತೆಯಲ್ಲಿ ವಿನಂತಿಸುವೆ.ರಾಷ್ಟ್ರೀಯ ಭದ್ರತೆ ಹಾಗೂ ಕಲ್ಯಾಣಕ್ಕೆ ನಮ್ಮ ಮನಸ್ಸು ಜಾಗೃತವಾಗಿರಬೇಕು ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News