​ಮಲಾಲಾಗೆ ಗುಂಡಿಕ್ಕಿದ್ದ ತಾಲಿಬಾನ್ ಉಗ್ರ ಪಾಕ್ ಜೈಲಿನಿಂದ ಪರಾರಿ !

Update: 2020-02-07 03:44 GMT
ಮಲಾಲಾ

ಇಸ್ಲಾಮಾಬಾದ್: ಮಲಾಲಾ ಯೂಸಫ್ ಝಾಯಿ ಮೇಲೆ 2012ರಲ್ಲಿ ಗುಂಡಿನ ದಾಳಿ ನಡೆದಿದ್ದ ಉಗ್ರ ಇಶಾನುಲ್ಲಾ ಇಶಾನ್ ಪಾಕಿಸ್ತಾನದ ಜೈಲಿನಿಂದ ಪರಾರಿಯಾಗಿದ್ದಾನೆ.

2014ರಲ್ಲಿ ಪೇಶಾವರದ ಸೇನಾ ಶಾಲೆಯ ಮೇಲೆ ನಡೆದ ಭೀಕರ ದಾಳಿಯಲ್ಲಿ ಕೂಡಾ ಈತ ಪ್ರಮುಖ ಆರೋಪಿ. ತಾನು ಜೈಲಿನಿಂದ ತಪ್ಪಿಸಿಕೊಂಡಿರುವುದನ್ನು ಈ ಉಗ್ರಗಾಮಿ ಆಡಿಯೊ ತುಣುಕಿನಲ್ಲಿ ಬಹಿರಂಗಪಡಿಸಿದ್ದಾನೆ.

ಇಶಾನ್ ಬಿಡುಗಡೆ ಮಾಡಿರುವ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜ. 11ರಂದು ಪಾಕಿಸ್ತಾನದ ಭಧ್ರತಾ ಪಡೆಗಳ ಬಂಧನದಿಂದ ತಪ್ಪಿಸಿಕೊಂಡಿರುವುದಾಗಿ ಇಶಾನ್ ಆಡಿಯೊ ತುಣುಕಿನಲ್ಲಿ ಹೇಳಿದ್ದಾನೆ. 2017ರಲ್ಲಿ ಶರಣಾಗತಿಯಾಗುವ ವೇಳೆ ಪಾಕಿಸ್ತಾನಿ ಪಡೆ ನೀಡಿದ್ದ ಆಶ್ವಾಸನೆಯನ್ನು ಕಾರ್ಯಗತಗೊಳಿಸಲು ವಿಫಲವಾದ ಹಿನ್ನೆಲೆಯಲ್ಲಿ ತಾನು ತಪ್ಪಿಸಿಕೊಂಡಿದ್ದಾಗಿ ವಿವರಿಸಿದ್ದಾನೆ.

ಈ ಆಡಿಯೊ ತುಣುಕು ಅಧಿಕೃತ ಎಂದಾದಲ್ಲಿ ತಾಲಿಬಾಲ್ ಚಟುವಟಿಕೆಯನ್ನು ಹತ್ತಿಕ್ಕಿರುವುದಾಗಿ ಪ್ರಚಾರ ಮಾಡುತ್ತಿರುವ ಪಾಕಿಸ್ತಾನದ ಪಾಲಿಗೆ ಇದು ದೊಡ್ಡ ಹಿನ್ನಡೆಯಾಗಲಿದೆ. ತಾನು ಎಲ್ಲಿದ್ದೇನೆ ಎಂಬ ಮಾಹಿತಿಯನ್ನು ಇಶಾನ್ ಬಹಿರಂಗಪಡಿಸಿಲ್ಲ. ಆದರೆ ಸದ್ಯದಲ್ಲೇ ತನ್ನ ಬಗ್ಗೆ ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾನೆ.

ಮಹಿಳಾ ಶಿಕ್ಷಣಕ್ಕಾಗಿ ಆಂದೋಲನ ನಡೆಸುತ್ತಿರುವ ಮಲಾಲಾ (22), ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಅತ್ಯಂತ ಕಿರಿಯ ಮಹಿಳೆ. 2012ರಲ್ಲಿ ಇವರ ಮೇಲೆ ಗುಂಡಿನ ದಾಳಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News