ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ನೂತನ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ

Update: 2020-02-07 12:04 GMT

ಬೆಂಗಳೂರು, ಫೆ. 7: ‘ಬಿಜೆಪಿ ಶಾಸಕರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ತನ್ನ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿಂತಿಸಲಿ’ ಎಂದು ನೂತನ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಿದ್ದ ಅವರು ತನ್ನ ಘನತೆಯನ್ನು ಅರಿತು ಮಾತನಾಡಬೇಕು. ಅದನ್ನು ಬಿಟ್ಟು ಮನಸೋ ಇಚ್ಛೆ ಮಾತನಾಡುವ ಮೂಲಕ ತನ್ನ ಗೌರವ ಕಳೆದುಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡುವುದು ಸಲ್ಲ ಎಂದು ಆಕ್ಷೇಪಿಸಿದರು.

ಕುಮಾರಸ್ವಾಮಿಗೆ 10 ವರ್ಷಕ್ಕೊಮ್ಮೆ ಅದೃಷ್ಟ ಖುಲಾಯಿಸುತ್ತದೆ. ಇದೀಗ ಅವರಿಗೆ ಅಧಿಕಾರ ಇಲ್ಲ. ಅವರಿಗೆ ಬಿಜೆಪಿಗೆ ಬರುವ ಆಸೆ ಇದ್ದರೆ ಹೇಳಲಿ. ನಾವೇ ಅವರೊಂದಿಗೆ ಚರ್ಚಿಸಿ ಬಿಜೆಪಿಗೆ ಕರೆದುಕೊಂಡು ಬರುತ್ತೇವೆ ಎಂದು ಬಿ.ಸಿ.ಪಾಟೀಲ್ ಲೇವಡಿ ಮಾಡಿದರು.

ನಾವು ಅರ್ಹರು: ‘ಸಂಪುಟ ಸೇರಿದರೂ ಅವರು ಅನರ್ಹರೇ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ್, ಜನತಾ ನ್ಯಾಯಲಯದಲ್ಲಿ ನಾವು ಅರ್ಹರಾಗಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಹೀಗಿದ್ದರೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದರೆ ಇವರು ಕಾನೂನು ಪದವಿ ಪಡೆದಿರುವ ಬಗ್ಗೆಯೇ ಸಂಶಯವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹದ್ದೇ ಖಾತೆ ಬೇಕೆಂದು ನಾವು ಪಟ್ಟು ಹಿಡಿದಿಲ್ಲ, ಬೇಡಿಕೆಯನ್ನೂ ಇಟ್ಟಿಲ್ಲ. ಸಿಎಂ ಬಿಎಸ್‌ವೈ ತನಗೆ ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿರ್ವಹಿಸಲು ಸಿದ್ಧ ಎಂದ ಅವರು, ತಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಕಾರಣ ಗೃಹ ಖಾತೆ ಸೂಕ್ತ ಎಂಬುದು ಕೆಲವರ ಅಭಿಪ್ರಾಯ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ನಮ್ಮಲ್ಲಿ ಬಿರುಕಿಲ್ಲ: ರಾಜೀನಾಮೆ ನೀಡಿದ್ದ 17 ಮಂದಿಯೂ ಒಟ್ಟಿಗೆ ಇದ್ದೇವೆ. ನಮ್ಮಲ್ಲಿ ಯಾವುದೇ ಒಡಕಿಲ್ಲ. ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರು ಸಂಪುಟಕ್ಕೆ ಸೇರ್ಪಡೆ ಆಗಬೇಕಿತ್ತು. ಆದರೆ, ಅನರ್ಹತೆ ಸಂಬಂಧ ಕೋರ್ಟ್ ಷರತ್ತು ಇರುವ ಕಾರಣ ಅದು ಸಾಧ್ಯವಾಗಿಲ್ಲ.

ಜೂನ್‌ನಲ್ಲಿ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಕುಮಟಳ್ಳಿ ಸೇರಿದಂತೆ ಎಲ್ಲರಿಗೂ ಕೊಟ್ಟ ಮಾತನ್ನು ಬಿಎಸ್‌ವೈ ಉಳಿಸಿಕೊಂಡಿದ್ದಾರೆ. ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಾಧ್ಯವಾಗಿಲ್ಲ. ಅದನ್ನು ಸಿಎಂ ಸರಿಪಡಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News