ವಿಟಾಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳನ್ನು ತಿಳಿದುಕೊಳ್ಳಿ

Update: 2020-02-07 16:25 GMT

ವಿಟಾಮಿನ್ ಡಿ ಕೊರತೆ ಇಂದು ವಿಶ್ವಾದ್ಯಂತ ಜೀವನಶೈಲಿ ಸಮಸ್ಯೆಯಾಗುತ್ತಿದೆ. ಇದು ಎಲ್ಲರನ್ನೂ ಕಾಡುತ್ತದೆಯಾದರೂ ಸೂರ್ಯನ ಬಿಸಿಲಿಗೆ ಸಾಕಷ್ಟು ಒಡ್ಡಿಕೊಳ್ಳದವರು ಈ ವಿಟಾಮಿನ್ ಕೊರತೆಯಿಂದ ಬಳಲುವ ಅಪಾಯ ಹೆಚ್ಚು.

ವಿಟಾಮಿನ್ ಡಿ ಕೊರತೆಯು ಅಸ್ಥಿರಂಧ್ರತೆ, ಸೋಂಕುಗಳು, ಅಲರ್ಜಿ, ಸ್ವರಕ್ಷಿತ ರೋಗಗಳು,  ಹೃದಯ ರಕ್ತನಾಳ ಕಾಯಿಲೆಗಳು, ಕ್ಷಯ, ಖಿನ್ನತೆ ಯಂತಹ ಸಮಸ್ಯೆಗಳು ಮತ್ತು ಕ್ಯಾನ್ಸರ್‌ಗೂ ಗುರಿಯಾಗಿಸುತ್ತದೆ.

ಹೆಚ್ಚಿನ ಪ್ರಕರಣಗಳಲ್ಲಿ ವಿಟಾಮಿನ್ ಡಿ ಕೊರತೆಯ ಲಕ್ಷಣಗಳು ಸುಪ್ತವಾಗಿರುತ್ತವೆ ಮತ್ತು ಇದೇ ಕಾರಣದಿಂದ ಹೆಚ್ಚಿನವರಿಗೆ ತಮ್ಮಲ್ಲಿ ವಿಟಾಮಿನ್ ಬಿ ಕೊರತೆಯಿದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಈ ವಿಟಾಮಿನ್ ಕೊರತೆಯನ್ನು ಸೂಚಿಸುವ ಕೆಲವು ಲಕ್ಷಣಗಳ ಕುರಿತು ಮಾಹಿತಿಯಲ್ಲಿದೆ.

* ಸೋಂಕುಗಳು

ವಿಟಾಮಿನ್ ಡಿ ಶರೀರದ ರೋಗ ನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುವ ಮೂಲಕ ಅದು ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುವಂತೆ ಮಾಡುತ್ತದೆ. ಶೀತ ಮತ್ತು ನ್ಯುಮೋನಿಯಾದಂತಹ ಶ್ವಾಸನಾಳ ಸೋಂಕುಗಳು ವಿಟಾಮಿನ್ ಡಿ ಕೊರತೆಯೊಂದಿಗೆ ಗುರುತಿಸಿಕೊಂಡಿವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

* ಆಯಾಸ

ಹಲವಾರು ಆರೋಗ್ಯ ಸಮಸ್ಯೆಗಳು ಆಯಾಸ ಮತ್ತು ಬಳಲಿಕೆಯನ್ನುಂಟು ಮಾಡುತ್ತವೆ ಮತ್ತು ವಿಟಾಮಿನ್ ಡಿ ಕೊರತೆ ಅವುಗಳಲ್ಲೊಂದಾಗಿದೆ. ಆದರೆ ಈ ಲಕ್ಷಣವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ರಕ್ತದಲ್ಲಿ ವಿಟಾಮಿನ್ ಡಿ ಮಟ್ಟ ಕಡಿಮೆಯಾದಾಗ ಅದು ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಇದರಿಂದಾಗಿ ಆಯಾಸ ಹಾಗೂ ಬಳಲಿಕೆ ಅನುಭವವಾಗುತ್ತದೆ.

* ಮೂಳೆಗಳಲ್ಲಿ ನೋವು

 ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರವನ್ನು ಹೊಂದಿದೆ ಮತ್ತು ಶರೀರವು ನಾವು ಸೇವಿಸಿದ ಆಹಾರಗಳಲ್ಲಿಯ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಾಮಿನ್ ಡಿ ಅಗತ್ಯವಾಗಿದೆ. ವಿಟಾಮಿನ್ ಡಿ ಕೊರತೆಯು ಮೂಳೆ ಸಾಂದ್ರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಮೂಳೆನೋವು ಮತ್ತು ಬೆನ್ನುನೋವಿನಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ವಿಟಾಮಿನ್ ಡಿ ಕೊರತೆಯು ದೀರ್ಘಕಾಲಿಕ ಬೆನ್ನುನೋವಿನೊಂದಿಗೆ ಗುರುತಿಸಿಕೊಂಡಿದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ ಮತ್ತು ಇದು ಕ್ರಮೇಣ ದೈನಂದಿನ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುವ ಮೂಲಕ ಜೀವನಶೈಲಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ವಿಟಾಮಿನ್ ಡಿ ಕೊರತೆಯುಳ್ಳವರು ಇತರರಿಗೆ ಹೋಲಿಸಿದರೆ ಕಾಲುಗಳು,ಪಕ್ಕೆಲಬುಗಳು ಮತ್ತು ಸಂದುಗಳಲ್ಲಿ ನೋವುಗಳನ್ನು ಅನುಭವಿಸುವ ದುಪ್ಪಟ್ಟು ಸಾಧ್ಯತೆಯನ್ನು ಹೊಂದಿರುತ್ತಾರೆ. ಗಂಭೀರ ಪ್ರಕರಣಗಳಲ್ಲಿ ಈ ವಿಟಾಮಿನ್ ಕೊರತೆಯು ಕಡಿಮೆ ಮೂಳೆ ಖನಿಜ ಸಾಂದ್ರತೆಯಿಂದಾಗಿ ಮೂಳೆ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ.

* ಸ್ನಾಯುಗಳಲ್ಲಿ ನೋವು

ವಿಟಾಮಿನ್ ಡಿ ಕೊರತೆಯು ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಸ್ನಾಯುನೋವನ್ನುಂಟು ಮಾಡಬಹುದು ಎನ್ನುವುದನ್ನು ಅಧ್ಯಯನವೊಂದು ತೋರಿಸಿದೆ. ತೀವ್ರ ಸ್ನಾಯುನೋವಿನಿಂದ ಬಳಲುತ್ತಿದ್ದ ಶೇ.71ರಷ್ಟು ಜನರಲ್ಲಿ ವಿಟಾಮಿನ್ ಡಿ ಕೊರತೆಯಿದ್ದುದು ಅಧ್ಯಯನದಲ್ಲಿ ಕಂಡು ಬಂದಿದೆ. ನೋವನ್ನು ಗ್ರಹಿಸುವ ನರಕೋಶಗಳ ಮೇಲೆ ವಿಟಾಮಿನ್ ಡಿ ಗ್ರಾಹಕಗಳಿರುವುದು ಇದಕ್ಕೆ ಕಾರಣವಾಗಿರಬಹುದು. ವಿಟಾಮಿನ್ ಡಿ ಕೊರತೆಯು ಈ ಗ್ರಾಹಕಗಳ ಅತಿ ಸಂವೇದನಾಶೀಲತೆಗೆ ಕಾರಣವಾಗುತ್ತದೆ ಮತ್ತು ನೋವನ್ನುಂಟು ಮಾಡುತ್ತದೆ.

* ಕೂದಲು ಉದುರುವಿಕೆ

ಪೋಷಕಾಂಶಗಳ ಕೊರತೆಯು ತಲೆಗೂದಲು ಉದುರುವಿಕೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ ಮಹಿಳೆಯರಲ್ಲಿ ವಿಟಾಮಿನ್ ಡಿ ಕೊರತೆಯು ತಲೆಗೂದಲು ನಷ್ಟಕ್ಕೆ ಕಾರಣವಾಗುತ್ತದೆ. ಹಲವಾರು ನರಶಾಸ್ತ್ರೀಯ ಮತ್ತು ಚಯಾಪಚಯ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಮಿದುಳಿನ ಅಂಗಾಂಶದಲ್ಲಿ ವಿಟಾಮಿನ್ ಡಿ ಗ್ರಾಹಕಗಳಿರುವುದು ಇದಕ್ಕೆ ಕಾರಣವಾಗಿರಬಹುದು. ವಿಟಾಮಿನ್ ಡಿ ಪೂರಕಗಳ ಸೇವನೆಯು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವವರ ಮನಃಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

ಈ ಯಾವುದೇ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ವಿಟಾಮಿನ್ ಡಿ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಆಹಾರ,ಸೂರ್ಯನ ಬಿಸಿಲು ಅಥವಾ ಪೂರಕಗಳ ಮೂಲಕ ಶರೀರಕ್ಕೆ ವಿಟಾಮಿನ್ ಡಿ ಅನ್ನು ಒದಗಿಸಿ ಕೊರತೆಯನ್ನು ನೀಗಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News