‘ಸಪ್ತಪದಿ ಸಾಮೂಹಿಕ’ ವಿವಾಹ ‘ಪ್ರಚಾರ ರಥ’ ಫೆ.13ಕ್ಕೆ ಉದ್ಘಾಟನೆ: ಸಚಿವ ಕೋಟ ಪೂಜಾರಿ

Update: 2020-02-07 14:22 GMT

ಬೆಂಗಳೂರು, ಫೆ. 7: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ರಾಜ್ಯದ ಆಯ್ದ 100 ಮುಜರಾಯಿ ದೇವಸ್ಥಾನಗಳಲ್ಲಿ ಎ.26ರಂದು ನಡೆಯಲಿರುವ ‘ಸಪ್ತಪದಿ ಸಾಮೂಹಿಕ’ ವಿವಾಹ ‘ಪ್ರಚಾರ ರಥ’ವನ್ನು ಫೆ.13ಕ್ಕೆ ಉದ್ಘಾಟಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಮಟ್ಟದಲ್ಲಿನ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ನಡೆಸಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಫೆ.13ರಂದು ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಪ್ರಚಾರ ರಥಯಾತ್ರೆ ಉದ್ಘಾಟನೆಗೊಳ್ಳಲಿದ್ದು, ಬೆಂಗಳೂರಿನ ಬನಶಂಕರಿ, ಬೆಂ. ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯ, ಬೆಳಗಾವಿಯ ರೇಣುಕಾ ಯಲ್ಲಮ್ಮ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರಿನ ಶ್ರೀಕಂಠೇಶ್ವರ, ಹಾಸನದ ಹಾಸನಾಂಭ ದೇವಾಲಯ ಸೇರಿ 12 ದೇವಾಲಯಗಳಿಂದ ‘ಪ್ರಚಾರ ರಥ’ ಮೂಲಕ ಜನರಿಗೆ ಮಾಹಿತಿ ತಲುಪಿಸಲಾಗುವುದು ಎಂದು ಹೇಳಿದರು.

ಸಪ್ತಪದಿ ಸಾಮೂಹಿಕ ವಿವಾಹದ ಮಾಹಿತಿ ನೀಡಲು ಟೋಲ್ ಫ್ರೀ ದೂರವಾಣಿ 1800 425 6654 ಮೂಲಕವೂ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ಎರಡು, ಮೂರು ತಿಂಗಳು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶ್ರೀಧರ್ ಎಂಬವರನ್ನು ವಿಶೇಷ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.

ಆದಾಯವಿರುವ ‘ಎ’ ವರ್ಗದ ದೇವಾಲಗಳಿಲ್ಲದ ಜಿಲ್ಲೆಗಳಲ್ಲಿ ‘ಬಿ’ ಮತ್ತು ‘ಸಿ’ ದರ್ಜೆ ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ಸಾಮೂಹಿಕ ವಿವಾಹ ಏರ್ಪಡಿಸಲಾಗುವುದು ಎಂದ ಅವರು, ವಿವಾಹ ಕಾರ್ಯಕ್ಕೆ ಇಲಾಖೆ ಅನುದಾನ ಭರಿಸಲಿದೆ ಎಂದು ಸ್ಪಷ್ಟನೆ ನೀಡಿದರು.

ಬೇರೆ ಇಲಾಖೆ ನೆರವು: ವಿವಾಹ ಕಾರ್ಯಕ್ಕೆ 10 ಸಾವಿರ ರೂ.ನಗದು ನೆರವಿನ ಕಂದಾಯ ಇಲಾಖೆ ‘ಆದರ್ಶ ವಿವಾಹ’ ಬಾಂಡ್ ಹಾಗೂ ಎಸ್ಸಿ-ಎಸ್ಟಿ ಸಮುದಾಯ ವಧು-ವರರಿಗೆ 50 ಸಾವಿರ ರೂ.ನೆರವು ನೀಡುವ ಸಮಾಜ ಕಲ್ಯಾಣ ಯೋಜನೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ತಿರುಪತಿ ತಿರುಮಲದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲು ಹಿರಿಯ ಅಧಿಕಾರಿಗಳಾದ ವರಪ್ರಸಾದ್ ರೆಡ್ಡಿ ಮತ್ತು ರೋಹಿಣಿ ಸಿಂಧೂರಿ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಕರ್ತವ್ಯ ಲೋಪ ಸಂಬಂಧ 17ಮಂದಿಗೆ ನೋಟಿಸ್ ನೀಡಲಾಗಿದೆ. ಶೀಘ್ರವೇ ಹಿರಿಯ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗುವುದು. ಅಲ್ಲದೆ, ಧಾರ್ಮಿಕ ವ್ಯವಸ್ಥಾಪಕರ ಸಮಿತಿ ಪುನರಚನೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ವರದಿ ನೀಡಲು ಇಲಾಖೆ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಲಾಗಿದೆ’

-ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News