ವಿಧಾನ ಪರಿಷತ್ ಚುನಾವಣೆ: ಡಿಸಿಎಂ ಸವದಿಗೆ ತಲೆನೋವಾದ ಮೈತ್ರಿ ಅಭ್ಯರ್ಥಿ
ಬೆಂಗಳೂರು, ಫೆ. 7: ವಿಧಾನಸಭೆ ಸದಸ್ಯರಾಗಿ ರಿಝ್ವಾನ್ ಅರ್ಶದ್ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ವಿಧಾನ ಪರಿಷತ್ತಿನ ಸದಸ್ಯರಾಗಿ ಅವಿರೋಧ ಆಯ್ಕೆ ಬಯಸಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕನಸು ಭಗ್ನಗೊಂಡಿದೆ.
ಫೆ.17ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಆರ್.ಅನಿಲ್ ಕುಮಾರ್ ಅಂತಿಮವಾಗಿ ಉಪಚುನಾವಣಾ ಕಣದಲಿದ್ದಾರೆ. ಸೂಚಕರ ಸಹಿ ಇಲ್ಲದಿರುವ ಕಾರಣ ಕೆ.ಪದ್ಮರಾಜನ್ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಪರಿಷತ್ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.
ಲಕ್ಷ್ಮಣ ಸವದಿ ಮತ್ತು ಅನಿಲ್ ಕುಮಾರ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಅವಿರೋಧ ಆಯ್ಕೆ ಬಯಸಿದ್ದ ಲಕ್ಷ್ಮಣ ಸವದಿಗೆ ಇದೀಗ ಚಿಂತೆ ಶುರುವಾಗಿದೆ. ಸಚಿವ ಸಂಪುಟಕ್ಕೆ ಅರ್ಹರ ಸೇರ್ಪಡೆ ಬೆನ್ನಲ್ಲೆ ಬಿಜೆಪಿಯೊಳಗೆ ಎದ್ದಿರುವ ಅಸಮಾಧಾನ ಹೊಗೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಮೈತ್ರಿ ಅಭ್ಯರ್ಥಿ ಇದ್ದಾರೆಂದು ಗೊತ್ತಾಗಿದೆ.
ವಿಧಾನಸಭೆಯಲ್ಲಿ ಒಬ್ಬ ನಾಮನಿರ್ದೇಶಿತ ಸದಸ್ಯರು ಸೇರಿ ಸದ್ಯ 223 ಸಂಖ್ಯಾಬಲ ಇದೆ. ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಮತಮೌಲ್ಯದ ಲೆಕ್ಕಾಚಾರದ ಬದಲು ಗರಿಷ್ಠ ಸಂಖ್ಯೆ ಮತಗಳನ್ನು ಪಡೆದವರು ಜಯ ಗಳಿಸಲಿದ್ದಾರೆ. ಲಕ್ಷ್ಮಣ ಸವದಿ ಅವರ ಸುಲಭ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು, ಫೆ. 17ರಂದು ನಡೆಯಲಿರುವ ಉಪಚುನಾವಣೆ ಗೆಲುವು ಯಾರದು ಎಂದು ತೀರ್ಮಾನಿಸಲಿದೆ.
ಗೌಪ್ಯ ಮತದಾನ ನಡೆಯುತ್ತಿರುವುದರಿಂದ ಶಾಸಕರು ಸೇರಿದಂತೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. ‘ಅಡ್ಡ ಮತದಾನ’ವೂ ಸುಲಭವಾಗಿದೆ. ಹೀಗಾಗಿಯೇ ಮೈತ್ರಿ ಮುಖಂಡರು ತೆರೆಮರೆಯಲ್ಲೆ ಸರಕಾರಕ್ಕೆ ಮರ್ಮಾಘಾತ ನೀಡಲು ಸಿದ್ದತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಫೆ.17ರಿಂದಲೇ ವಿಧಾನಸಭೆ ಜಂಟಿ ಅಧಿವೇಶನವೂ ಆರಂಭಗೊಳ್ಳಲಿದ್ದು, ಮಾರ್ಚ್ 2ರಿಂದ 1 ತಿಂಗಳ ಕಾಲ ಬಜೆಟ್ ಅಧಿವೇಶನವೂ ನಡೆಯಲಿದೆ. ಹೀಗಾಗಿ ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಲು ವಿರೋಧ ಪಕ್ಷಗಳು ಒಗ್ಗಟ್ಟಿನ ಮಂತ್ರಕ್ಕೆ ಶರಣಾಗಿದ್ದು, ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲ ಸೃಷ್ಟಿಸಿದೆ.