ಮನೆಗಳವು ಪ್ರಕರಣ: ಮಹಿಳೆ ಸೇರಿ 7 ಮಂದಿ ಬಂಧನ
ಬೆಂಗಳೂರು, ಫೆ.7: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಮನೆಗಳವು ಮಾಡುತ್ತಿದ್ದ ಮಹಿಳೆ ಸೇರಿ 7 ಮಂದಿಯಿದ್ದ ಗ್ಯಾಂಗ್ ಅನ್ನು ಕೋಣನಕುಂಟೆ ಪೊಲೀಸರು ಬಂಧಿಸಿ, ಬಂಧಿತರಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇನ್ನಿತರ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆನೇಕಲ್‌ನ ಗಣೇಶ(29), ಗಂಗಾಧರ(22), ಮನೋಜ್ ಕುಮಾರ್(24), ನಾಗರಾಜು(23), ಚೇತನ್(22), ರಘು(22), ನೇತ್ರಾವತಿ(43) ಬಂಧಿತ ಆರೋಪಿಗಳು. ಬಂಧಿತರಿಂದ 13 ಲಕ್ಷ ರೂ. ಮೌಲ್ಯದ 260 ಗ್ರಾಂ ಚಿನ್ನಾಭರಣ, 1.4 ಕೆಜಿ ಬೆಳ್ಳಿ, ಟಿವಿ, ಕ್ಯಾಮೆರಾ, ಮೊಬೈಲ್, ವಿದೇಶಿ ಹಣ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಕುಮಾರಸ್ವಾಮಿ ಲೇಔಟ್, ಕೋಣನಕುಂಟೆ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದರು. ಗಣೇಶನನ್ನು ಬಿಟ್ಟರೆ ಉಳಿದೆಲ್ಲಾ ಆರೋಪಿಗಳು ಮೊದಲ ಬಾರಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು, ಆರೋಪಿಗಳ ಬಂಧನದಿಂದ ಕೋಣನಕುಂಟೆಯ 2 ಕನ್ನಗಳವು ಅನ್ನಪೂರ್ಣೇಶ್ವರಿಯ 1 ಕನ್ನಗಳವು ಸೇರಿ 3 ಪ್ರಕರಣಗಳು ಪತ್ತೆಯಾಗಿವೆ.