ದ್ವೇಷ ರಾಜಕಾರಣವೇ ಬದುಕಿನ ಭಾಗವಾಗುತ್ತಿದೆ: ಹಿರಿಯ ಕಾದಂಬರಿಗಾರ್ತಿ ಶಶಿ ದೇಶಪಾಂಡೆ
ಬೆಂಗಳೂರು, ಫೆ.7: ದ್ವೇಷ ರಾಜಕಾರಣ ಮತ್ತು ಧ್ರುವೀಕರಣವೇ ಇಂದು ನಮ್ಮ ಬದುಕಿನ ಭಾಗವಾಗುತ್ತಿದೆ. ಆದರೆ, ಆರ್ಥಿಕ ಪ್ರಕ್ರಿಯೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಎಲ್ಲಿ ಆರ್ಥಿಕ ಪ್ರಗತಿ ಇರುವುದಿಲ್ಲವೋ ಅಲ್ಲಿ ಸಾಮಾಜಿಕ ಸಾಮರಸ್ಯವೂ ಇರುವುದಿಲ್ಲ ಎಂದು ಹಿರಿಯ ಕಾದಂಬರಿಗಾರ್ತಿ ಶಶಿ ದೇಶಪಾಂಡೆ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ, ಪೌರತ್ವ ಹಾಗೂ ಗುರುತುಗಳು ಕುರಿತು ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ, ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಹುತ್ವ ಎನ್ನುವುದು ಭಾರತೀಯ ಸಮಾಜದ ಆಭರಣದಂತೆ. ಆದರೆ, ಇಂದು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡುತ್ತಿದ್ದಾರೆ. ಹಿಂದೂ-ಮುಸ್ಲಿಂ ಏಕತೆಗೆ ದುಡಿದ ಮಹಾತ್ಮ ಗಾಂಧಿಯಂತಹ ವ್ಯಕ್ತಿಯನ್ನು ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಂಕಣಕಾರ ಆಕಾರ್ ಪಟೇಲ್ ಮಾತನಾಡಿ, ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ನಂತರ ಸಾವಿರಾರು ಜನ ಬಂಧನ ಕೇಂದ್ರಗಳಲ್ಲಿದ್ದಾರೆ. ಇದನ್ನೇ ಇಡೀ ದೇಶದಲ್ಲಿ ತರಲು ಸರಕಾರ ಹೊರಟಿದೆ. ದಾಖಲೆಗಳಲ್ಲಿನ ಸಣ್ಣ ಕಾಗುಣಿತ ದೋಷವಿದ್ದರೂ ಪೌರತ್ವವನ್ನು ನಿರಾಕರಿಸಲಾಗುತ್ತಿದೆ ಎಂದು ತಿಳಿಸಿದರು.
ಇತಿಹಾಸಕಾರ ರಾಮಚಂದ್ರ ಗುಹಾ ಮಾತನಾಡಿ, ಬ್ರಿಟಿಷರ ಕಾಲದಲ್ಲಿ, ತುರ್ತು ಪರಿಸ್ಥಿತಿ ವೇಳೆಯೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಆದರೆ, ಆಗ ಯಾರೂ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳನ್ನು ನಾಶ ಮಾಡಿರಲಿಲ್ಲ. ಏಕೆಂದರೆ, ಬ್ರಿಟಿಷರೂ ಪುಸ್ತಕ ಓದಿದ್ದರು. ಇಂದಿರಾಗಾಂಧಿಯೂ ಪುಸ್ತಕ ಓದಿದ್ದರು ಎಂದು ಹೇಳಿದರು.
ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ, ಎನ್‌ಪಿಆರ್ ಮತ್ತಿತರ ಉದ್ದೇಶಗಳಿಗೆ ಜನರ ಮಾಹಿತಿ ಸಂಗ್ರಹಿಸಲಾಗುತ್ತದೆ. ಕಾನೂನು ಪ್ರಕಾರ ಇಂತಹ ಜನಗಣತಿಯ ಮಾಹಿತಿಯನ್ನು ಗೌಪ್ಯವಾಗಿಡಬೇಕಾಗುತ್ತದೆ. ಈಗ ಕಾನೂನುಬಾಹಿರವಾಗಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್‌ಜಿ ವಿವಿಯ ಪ್ರೊ.ಮಾಲಿನಿ ಭಟ್ಟಾಚಾರ್ಜಿ ಉಪಸ್ಥಿತರಿದ್ದರು.