ಎಸೆಸೆಲ್ಸಿ-ಪಿಯುಸಿ ಪರೀಕ್ಷೆ: ಡಿಸಿ ಕಚೇರಿಗಳಲ್ಲಿ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆ- ಸಚಿವ ಸುರೇಶ್ ಕುಮಾರ್

Update: 2020-02-07 18:08 GMT

ಬೆಂಗಳೂರು, ಫೆ.7: ಪ್ರಸಕ್ತ ಸಾಲಿನ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಯಾವುದೇ ಬಗೆಯ ಅಕ್ರಮಗಳು ನಡೆಯದಂತೆ ತಡೆಯಲು ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ತಿಳಿಸಿದರು.

ಶುಕ್ರವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪೊಲೀಸ್ ಇಲಾಖೆ, ಸೈಬರ್ ಕ್ರೈಂ, ಸಿಡಿಎಂಎ, ಗುಪ್ತಚರ ಇಲಾಖೆ, ಖಜಾನೆ ಅಧಿಕಾರಿಗಳೊಂದಿಗೆ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಸುರಕ್ಷಾ ಕ್ರಮಗಳ ಕುರಿತು ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಇಡುವ ಜಿಲ್ಲಾಧಿಕಾರಿಗಳ ಕಚೇರಿಯ ಖಜಾನೆ ಉಗ್ರಾಣದ ಸುತ್ತಮುತ್ತಲು ಇದೇ ಮೊದಲ ಬಾರಿಗೆ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಯಾವುದೇ ರೀತಿಯ ಅಕ್ರಮಗಳು ಆಗದಂತೆ ಹೆಚ್ಚಿನ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಶಿಕ್ಷಕರು ಸಹ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.

ಈ ಬಾರಿ ರಾಜ್ಯಾದ್ಯಂತ 1060 ಪರೀಕ್ಷಾ ಕೇಂದ್ರಗಳಲ್ಲಿ 6.80 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 160 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಟ್ಯೂಷನ್ ಕೇಂದ್ರಗಳು, ಝೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಸೆಂಟರ್‌ಗಳ ಮೇಲೆ ಇಲಾಖೆಯು ಹೆಚ್ಚಿನ ನಿಗಾ ವಹಿಸಿದೆ. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಕುರಿತು ವದಂತಿಗಳನ್ನು ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು.

ಪರೀಕ್ಷೆಗಳ ಸಿದ್ಧತೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು ಫೆ.14ರಂದು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News