ಜಾನಪದ ಸಂಸ್ಕೃತಿ ಬೆವರಿನ ಭಾಷೆ: ಬರಗೂರು ರಾಮಚಂದ್ರಪ್ಪ

Update: 2020-02-07 18:20 GMT

ಬೆಂಗಳೂರು, ಫೆ.7: ಜಾನಪದ ಸಂಸ್ಕೃತಿಯು ಬೆವರಿನ ಭಾಷೆಯಾಗಿದ್ದು, ಹೃದಯಕ್ಕೆ ಹತ್ತಿರವಾದಾಗ ಸಂಸ್ಕೃತಿಯ ಅಸ್ಮಿತೆ ದೊರೆಯುತ್ತದೆ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಶುಕ್ರವಾರ ಬಿಎಂಎಸ್ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾನಪದ ಜಾತ್ರೆ -2020 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಾಕಾರವಾದ ಜಾನಪದ ಸಾಹಿತ್ಯಕ್ಕೆ ಹೃದಯಕ್ಕೆ ತಲುಪುವ ಶಕ್ತಿ ಇದೆ. ವೈವಿಧ್ಯಮಯ ಜಾನಪದ ಸಂಸ್ಕೃತಿಯು ಜನರ ಜೀವನದ ಭಾಗವಾಗಿದೆ ಎಂದು ಹೇಳಿದರು.

ಸಂಸ್ಕೃತಿ ಕೇವಲ ಆಚರಣೆಯಲ್ಲ, ಅದೊಂದು ಜನರ ಜೀವನ ವಿಧಾನ. ಭಾರತೀಯರ ಜನರ ಜೀವನ ವಿಧಾನದಲ್ಲಿ ವೈವಿಧ್ಯತೆಯಿದ್ದು ಈ ಬಹುತ್ವದ ಸಂಸ್ಕೃತಿಯ ಅರಿವು ಮೂಡಿಸುವುದೇ ಜಾನಪದ ಸಂಸ್ಕೃತಿ. ಎಲ್ಲೆಲ್ಲಿ ಜನರಿದ್ದಾರೆಯೋ ಅದೆಲ್ಲವನ್ನೂ ಜಾನಪದ ಎನ್ನಬಹುದು. ನಗರದಲ್ಲಿನ ಜಾನಪದಕ್ಕೆ ಲಿಖಿತ ಜಾನಪದ ಎಂಬ ಹೊಸ ವ್ಯಾಖ್ಯಾನ ನೀಡಲಾಗಿದೆ ಎಂದು ಹೇಳಿದರು.

ದೇಶದಲ್ಲಿರುವ 11 ಕೋಟಿ ಬುಡಕಟ್ಟು ಜನರ ಜೀವನ ಕ್ರಮದಲ್ಲಿ ವೈವಿಧ್ಯವಿದೆ. ವಿಭಿನ್ನ ಜೀವನಕ್ರಮಗಳ ಸಮ್ಮಿಳಿತವೇ ಜಾನಪದ. ಉತ್ಪಾದನಾ ಪದ್ಧತಿ ಬದಲಾದ್ದರಿಂದ ಜನರ ಜೀವನ ಕ್ರಮದಲ್ಲೂ ಬದಲಾವಣೆಯಾಯಿತು. ನಾವು ಆರೋಗ್ಯಕರವಾದದ್ದನ್ನು ಸ್ವೀಕರಿಸಿದಾಗ ಮಾತ್ರ ಜಾನಪದ ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ. ಜನಪದವು ಅನುಭವವಾಗಬೇಕೇ ಹೊರತು ಅಭಿನಯವಾಗಬಾರದು ಎಂದು ಹೇಳಿದರು.

ನಾನು ಜಾನಪದ ಸಾಹಿತಿಯಲ್ಲ, ಜನಪರ ಸಾಹಿತಿ. ಮನುಷ್ಯರಾಗಲು ಯಾವುದು ಸಹಕಾರಿಯಾಗಿದೆಯೋ ಅದೆಲ್ಲವೂ ಜನಪದ. ಇಂತಹ ಸಮೂಹ ಕಲೆಯು ಅವಿದ್ಯಾವಂತರದ್ದು ಎಂಬ ಭಾವನೆಯಿದೆ. ಆದರೆ ಶಿಕ್ಷಣ ಸಂಸ್ಕೃತಿಯ ಮಾನದಂಡವಲ್ಲ. ಹಳ್ಳಿಗಳಲ್ಲಿ ವೈವಿಧ್ಯವಾದ ರಾಮಾಯಣ, ಮಹಾಭಾರತಗಳನ್ನು ಕಟ್ಟಿದವರು ಅನಕ್ಷರಸ್ಥರು. ಆದ್ದರಿಂದ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಕ್ಷೆ ಡಾ. ಬಿ.ಎಸ್. ರಾಗಿಣಿ ನಾರಾಯಣ್, ನಿವೃತ್ತ ಐಎಎಸ್ ಅಧಿಕಾರಿ ಎಂ. ಮದನ್ ಗೋಪಾಲ್, ವಿಶ್ವವಿದ್ಯಾಲಯದ ಧರ್ಮದರ್ಶಿ ಅವಿರಾಮ್ ಶರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News