ಇಂದು ಭಾರತ- ನ್ಯೂಝಿಲ್ಯಾಂಡ್ ಎರಡನೇ ಏಕದಿನ ಪಂದ್ಯ

Update: 2020-02-07 18:40 GMT

ಆಕ್ಲೆಂಡ್, ಫೆ.7: ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಶನಿವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ.

ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದ್ದರೂ ಬೌಲಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯದಿಂದಾಗಿ ಸೋಲು ಅನುಭವಿಸಿತ್ತು.

   ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ನ್ಯೂಝಿಲ್ಯಾಂಡ್ ತಂಡ ಇನ್ನೊಂದು ಪಂದ್ಯ ಜಯಿಸಿದರೆ ಸರಣಿಯನ್ನು ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ತನ್ನದಾಗಿಸುತ್ತದೆ. ಸರಣಿಯನ್ನು ಗೆಲ್ಲಲು ಭಾರತ ಇನ್ನೆರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಕಳೆದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ದೊಡ್ಡ ಮೊತ್ತದ ಸವಾಲನ್ನು ಬೆನ್ನಟ್ಟಿ 4 ವಿಕೆಟ್‌ಗಳ ಜಯ ಗಳಿಸಿತ್ತು. ನ್ಯೂಝಿಲ್ಯಾಂಡ್ ಇದೇ ಮೊದಲ ಬಾರಿ ಬೆಟ್ಟದಂತಹ ಸವಾಲನ್ನು ಬೆನ್ನಟ್ಟಿ ಗೆಲುವು ದಾಖಲಿಸಿದೆ. ಟ್ವೆಂಟಿ-20ಯಲ್ಲಿ 0-5 ಅಂತರದಲ್ಲಿ ಸರಣಿ ಕಳೆದುಕೊಂಡಿದ್ದ ನ್ಯೂಝಿಲ್ಯಾಂಡ್ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡಿದೆ. ರಾಸ್ ಟೇಲರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೆನ್ರಿ ನಿಕೊಲ್ಸ್ ಮತ್ತು ಮಾರ್ಟಿನ್ ಗಪ್ಟಿಲ್ ಪ್ರದರ್ಶನ ಚೆನ್ನಾಗಿದೆ. ಹಂಗಾಮಿ ನಾಯಕ ಟಾಮ್ ಲಥಾಮ್ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಫಿಟ್ನೆಸ್ ಸಮಸ್ಯೆಯಿಂದ ಹೊರ ಬಂದಿಲ್ಲ. ಸ್ಕಾಟ್ ಕುಗ್ಲೆಜಿನ್ ಅಸೌಖ್ಯದ ಕಾರಣದಿಂದಾಗಿ ಎರಡನೇ ಪಂದ್ಯಕ್ಕೆ ತಂಡದ ಸೇವೆಗೆ ಲಭ್ಯರಿಲ್ಲ. ಇಶ್ ಸೋಧಿ ಬದಲಿಗೆ ಕೇಲ್ ಜಮೈಸನ್ ತಂಡದ ಅಂತಿಮ ಹನ್ನೊಂದರ ಬಳಗದಲ್ಲಿ ಆಡುವ ಸಾಧ್ಯತೆ ಇದೆ.

    ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲಟ್ಟಿದ್ದ ಭಾರತ ತಂಡ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 347 ರನ್ ಗಳಿಸಿತ್ತು. ನ್ಯೂಝಿಲ್ಯಾಂಡ್ 48.1 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದಲ್ಲಿ 348 ರನ್ ಗಳಿಸಿ ಗೆಲುವಿನ ದಡ ಸೇರಿತ್ತು. ಏಡೆನ್ ಪಾರ್ಕ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಸೋಲು ಖಚಿತ. ಈ ಹಿಂದೆ ಎರಡು ಟ್ವೆಂಟಿ-20 ಪಂದ್ಯಗಳಲ್ಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡು ಸೋಲು ಅನುಭವಿಸಿತ್ತು. ಈ ಕಾರಣದಿಂದಾಗಿ ಇಲ್ಲಿ ಟಾಸ್ ನಿರ್ಣಾಯಕವಾಗಿದೆ.

  

 ಭಾರತ ಮೊದಲ ಪಂದ್ಯದಲ್ಲಿ ಸೋತು ಆನಂತರದ ಪಂದ್ಯಗಳಲ್ಲಿ ಜಯ ಗಳಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯ ವಿರುದ್ಧ ಇದೇ ರೀತಿ ಮೊದಲ ಪಂದ್ಯಗಳಲ್ಲಿ ಸೋತು ಬಳಿಕ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಜಸ್‌ಪ್ರೀತ್ ಬುಮ್ರಾರನ್ನು ನಾಯಕ ಕೊಹ್ಲಿ ಅತಿಯಾಗಿ ಅವಲಂಬಿಸಿರುವುದು ತಂಡದ ಸೋಲಿಗೆ ಕಾರಣವಾಗಿತ್ತು. ಬುಮ್ರಾರನ್ನು ಪ್ರತಿ ಬಾರಿ ದಾಳಿಗಿಳಿಸುವಾಗಲೂ ಅವರಿಂದ ವಿಕೆಟ್ ನಿರೀಕ್ಷಿಸುತ್ತಾರೆ. ಭಾರತ ತಂಡದ ಫೀಲ್ಡಿಂಗ್ ಬಗ್ಗೆ ಈಗ ಅಪಸ್ವರ ಕೇಳಿ ಬಂದಿದೆ. ಭಾರತ ಈ ಹಿಂದೆ ಚೆನ್ನೈ, ಮುಂಬೈ ಮತ್ತು ಹ್ಯಾಮಿಲ್ಟನ್‌ನಲ್ಲಿ ಕಳಪೆ ಫೀಲ್ಡಿಂಗ್‌ನಿಂದಾಗಿ ಕೈ ಸುಟ್ಟುಕೊಂಡಿತ್ತು. ಬಾಂಗ್ಲಾದೇಶ ಸರಣಿಯ ಬಳಿಕ ಭಾರತದ ಫೀಲ್ಡಿಂಗ್‌ನ ದೌರ್ಬಲ್ಯ ಕಾಣಿಸಿಕೊಂಡಿದೆ. ಭಾರತದ ಆಟಗಾರರ ಫೀಲ್ಡಿಂಗ್ ಕಳಪೆಯಾಗಿತ್ತು. ಕಳೆದ ಪಂದ್ಯದಲ್ಲಿ 23ನೇ ಓವರ್‌ನಲ್ಲಿ ಜಡೇಜ ಎಸೆತದಲ್ಲಿ ಕುಲದೀಪ್ ಯಾದವ್ ಕ್ಯಾಚ್ ಕೈಚೆಲ್ಲುವ ಮೂಲಕ ಟೇಲರ್‌ಗೆ ಜೀವದಾನ ನೀಡಿದ್ದರು. ಆಗ ಟೇಲರ್ ಕೇವಲ 10 ರನ್ ಗಳಿಸಿದ್ದರು. ಇದರ ಲಾಭ ಪಡೆದ ಟೇಲರ್ ತನ್ನ ಬ್ಯಾಟಿಂಗ್‌ನ್ನು ಮುಂದುವರಿಸಿ ಶತಕ ದಾಖಲಿಸಿ ತಂಡದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದ್ದರು. ಕಿವೀಸ್‌ಗೆ ತಿರುಗೇಟು ನೀಡಲು ಭಾರತ ಆಲ್‌ರೌಂಡ್ ಪ್ರದರ್ಶನ ನೀಡಬೇಕಾಗಿದೆ. ನ್ಯೂಝಿಲ್ಯಾಂಡ್‌ನಲ್ಲಿ ಅತಿಯಾದ ಗಾಳಿಯ ವಾತಾವರಣದಲ್ಲಿ ಕ್ಯಾಚ್ ತೆಗೆದುಕೊಳ್ಳುವುದು ಕಠಿಣ. ಎರಡನೇ ಪಂದ್ಯಕ್ಕೆ ಅಣಿಯಾಗಲು ನವದೀಪ ಸೈನಿ ಮತ್ತು ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಕಳೆದ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಮೊದಲ ಬಾರಿ ಇನಿಂಗ್ಸ್ ಆರಂಭಿಸಿ ಯಶಸ್ಸು ಗಳಿಸಿದ್ದರು. ಭಾರತ ತಂಡದ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ (103) ರಾಹುಲ್ ಔಟಾಗದೆ 88 ರನ್, ನಾಯಕ ಕೊಹ್ಲಿ 51 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News