ಭಾರತಕ್ಕೆ ಇಂದು ವಿಶ್ವ ಚಾಂಪಿಯನ್ ಬೆಲ್ಜಿಯಂ ಎದುರಾಳಿ

Update: 2020-02-07 18:43 GMT

ಭುವನೇಶ್ವರ, ಫೆ.7: ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಭರ್ಜರಿ ಆರಂಭ ಪಡೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಭಾರತ ಶನಿವಾರ ಟೂರ್ನಮೆಂಟ್‌ನಲ್ಲಿ ಆಡಲಿರುವ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡದಿಂದ ಕಠಿಣ ಸವಾಲು ಎದುರಿಸಲಿದೆ.

2019ರಲ್ಲಿ ನಡೆದ ಮೊದಲ ಆವೃತ್ತಿಯ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದ ಭಾರತ ಈ ವರ್ಷ ಲೀಗ್‌ನಲ್ಲಿ ಕನಸಿನ ಆರಂಭ ಪಡೆದಿತ್ತು. ನೆದರ್ಲೆಂಡ್ ವಿರುದ್ಧ ಆಡಿದ ಮೊದಲ ಸುತ್ತಿನ ಪಂದ್ಯದಲ್ಲಿ ಐದು ಅಂಕ ಸಂಗ್ರಹಿಸಿತ್ತು.

ವಿಶ್ವದ ನಂ.5ನೇ ರ್ಯಾಂಕ್‌ನ ಭಾರತ ತಂಡ ನೆದರ್ಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು 5-2 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿತ್ತು. ಕಳೆದ ತಿಂಗಳು ನಡೆದಿದ್ದ ಎರಡನೇ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು 3-3ರಿಂದ ಸಮಬಲ ಸಾಧಿಸಿದ್ದವು. ಆಗ ಶೂಟೌಟ್‌ನಲ್ಲಿ ಭಾರತ ತಂಡ ಡಚ್ಚರನ್ನು 5-2 ಅಂತರದಿಂದ ಮಣಿಸಿತು.

ಆ ಬಳಿಕ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಲೀಗ್‌ನಲ್ಲಿ ಭಾಗವಹಿಸಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಬೆಲ್ಜಿಯಂ 4 ಪಂದ್ಯಗಳಲ್ಲಿ 11 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಲೆಂಡ್ 7 ಪಂದ್ಯಗಳಲ್ಲಿ ಏಳಂಕವನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ.

 ನಾಲ್ಕು ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿರುವ ಆಸ್ಟ್ರೇಲಿಯ ಮೂರನೇ ಸ್ಥಾನದಲ್ಲಿದೆ. ಜರ್ಮನಿ ಹಾಗೂ ಭಾರತ ಆ ಬಳಿಕದ ಸ್ಥಾನದಲ್ಲಿವೆ. ಭಾರತ ಲೀಗ್‌ನಲ್ಲಿ ಉತ್ತಮ ಆರಂಭ ಪಡೆದಿರುವ ಹೊರತಾಗಿಯೂ ಕಳಿಂಗ ಸ್ಟೇಡಿಯಂನಲ್ಲಿ ಬೆಲ್ಜಿಯಂ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಇದೇ ಮೈದಾನದಲ್ಲಿ ರೆಡ್ ಲಯನ್ಸ್ ಖ್ಯಾತಿಯ ಬೆಲ್ಜಿಯಂ 2018ರಲ್ಲಿ ಚೊಚ್ಚಲ ಎಫ್‌ಐಎಚ್ ವರ್ಲ್ಡ್‌ಕಪ್‌ನ್ನು ಎತ್ತಿ ಹಿಡಿದಿತ್ತು. ಬೆಲ್ಜಿ ಯಂ ಇತ್ತೀಚೆಗಷ್ಟೇ ವಿಶ್ವ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿತ್ತು. ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಜಯ ಸಾಧಿಸಿದ ಬಳಿಕ ಬೆಲ್ಜಿಯಂ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿ ಸಿಕೊಂಡಿದೆ.

‘‘ಮುಂಬರುವ ಪಂದ್ಯಗಳಲ್ಲಿ ಆತಿಥೇಯ ಭಾರತದಿಂದ ನಮಗೆ ಪ್ರಬಲ ಪೈಪೋಟಿ ಎದುರಾಗಲಿದೆ. ನೆದರ್ಲೆಂಡ್ ವಿರುದ್ಧ ಪಂದ್ಯದ ಬಳಿಕ ನೈತಿಕ ಸ್ಥೈರ್ಯ ಪಡೆದಿರುವ ಭಾರತ ಈಗ ಸಂಪೂರ್ಣ ಭಿನ್ನ ತಂಡವಾಗಿದೆ’’ ಎಂದು ಬೆಲ್ಜಿಯಂ ನಾಯಕ ಥಾಮಸ್ ಬ್ರೀಲ್ಸ್ ಹೇಳಿದ್ದಾರೆ.

ಕಳಿಂಗ ಸ್ಟೇಡಿಯಂನಲ್ಲಿ ಭಾರತ-ಬೆಲ್ಜಿಯಂ ಒಟ್ಟು 10 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪ್ರವಾಸಿ ಬೆಲ್ಜಿಯಂ 8 ಬಾರಿ ಜಯಭೇರಿ ಬಾರಿಸಿದೆ. ಎರಡು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದೆ.

 ಭಾರತ ತಂಡ ಬೆಲ್ಜಿಯಂ ವಿರುದ್ಧ ಆಡಿದ ಬಳಿಕ ಫೆ.21 ಹಾಗೂ 22ರಂದು ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಜರ್ಮನಿ(ಎ.25 ಹಾಗೂ 26),ಗ್ರೇಟ್ ಬ್ರಿಟನ್(ಮೇ 2 ಹಾಗೂ 3), ಅರ್ಜೆಂಟೀನ(ಜೂ.5 ಹಾಗೂ 6) ಹಾಗೂ ಸ್ಪೇನ್(ಜೂ.13 ಹಾಗೂ 14)ತಂಡಗಳನ್ನು ವಿದೇಶದಲ್ಲಿ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News