ಬಹುಸಂಖ್ಯಾತರ ಆಹಾರ ಸಂಸ್ಕೃತಿಯ ಮೇಲೆ ಆರೆಸ್ಸೆಸ್, ಬಿಜೆಪಿ ರಾಜಕಾರಣ: ಮಾವಳ್ಳಿ ಶಂಕರ್

Update: 2020-02-08 16:58 GMT

ಬೆಂಗಳೂರು, ಫೆ.8: ಮಕ್ಕಳ ಬಿಸಿಯೂಟದಲ್ಲಿ ಪೌಷ್ಟಿಕತೆ ಕಾಣೆಯಾಗಿದೆ. ಬೆಳ್ಳುಳ್ಳಿ, ಈರುಳ್ಳಿ ಇಲ್ಲದ ಆಹಾರ ಹೇಗೆ ಪೌಷ್ಟಿಕ ಆಹಾರ ಆಗುತ್ತೆ ಎಂದು ದಲಿತ ಸಂಷರ್ಷ ಸಮಿತಿಯ ಸಂಚಾಲಕ ಮುಖಂಡ ಮಾವಳ್ಳಿ ಸಂಕರ್ ಪ್ರಶ್ನಿಸಿದರು.

ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಂವಾದ ಮತ್ತು ಯುವಮುನ್ನಡೆ ಸಂಘಟನೆಗಳ ಆಶ್ರಯದಲ್ಲಿ ನಡೆದ ‘ಯುವಜನ ಆರೋಗ್ಯ ಅರಿವಿನ ಮೇಳ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಬಹುಸಂಖ್ಯಾತರ ಆಹಾರ ಸಂಸ್ಕೃತಿಯ ಮೇಲೆ ಆರೆಸ್ಸೆಸ್, ಬಿಜೆಪಿ ರಾಜಕಾರಣ ಮಾಡುತ್ತಿದೆ. ದೇಶದ ಜನತೆ ಏನನ್ನು ತಿನ್ನಬೇಕೆಂದು ಸರಕಾರಗಳು ನಿರ್ಧರಿಸುವ ಮಟ್ಟಿಗೆ ಕೋಮುವಾದಿ ಪ್ರಭುತ್ವಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೆಂದು ಅವರು ಎಚ್ಚರಿಸಿದರು.

ಹಿರಿಯ ಲೇಖಕಿ ಎನ್.ಗಾಯತ್ರಿ ಮಾತನಾಡಿ, ದೇಶದಲ್ಲಿ ಜನರ ಚರ್ಚೆಗಳಿಗೆ, ಅಭಿಪ್ರಾಯಗಳಿಗೆ ಮಾನ್ಯತೆಯೇ ಇಲ್ಲವಾಗಿದೆ. ಇದರಿಂದಾಗಿ ಸಾಮಾನ್ಯರ ಬದುಕಿಗೆ ಅರ್ಥವಿಲ್ಲದಂತಾಗಿದೆ. ಪ್ರಭುತ್ವ ಹೇಳಿದ್ದನ್ನು ಜನತೆ ತಲೆ ಬಗ್ಗಿಸಿಕೊಂಡು ಅನುಸರಿಸಬೇಕೆಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಮ್ಮ ಹಿರಿಯರು ಸಮೋತೋಲನ ಆಹಾರ ಸೇವಿಸುವ ಮೂಲಕ ಸಮಗ್ರ ಪೋಷಕಾಂಶವನ್ನು ಪಡೆಯುತ್ತಿದ್ದರು. ಈ ನೆಲದ ಕೃಷಿ ಸಂಸ್ಕೃತಿ ಬಿನ್ನವಾಗಿದೆ. ಪ್ರಾದೇಶಿಕವಾಗಿ ನೆಲದ ಗುಣಗಳಿಗೆ ಹೊಂದುವ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಬದುಕುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ನಮ್ಮ ಹಳ್ಳಿಗಾಡಿನ ಸಾಮಾನ್ಯ ಜನತೆಗಿದ್ದ ಸಣ್ಣ ಸೂಕ್ಷ್ಮ ಪ್ರಜ್ಞೆಯು ಸರಕಾರಗಳಿಗಿಲ್ಲ. ಸರಕಾರ ಬಿಸಿ ಊಟ ನೀಡುತ್ತೇವೆ ಎಂದು ಹೇಳುತ್ತದೆ. ಆದರೆ, ಅದರಲ್ಲಿ ಪೌಷ್ಟಿಕತೆ ಇದೆಯೆ. ಆರೋಗ್ಯವನ್ನು ನೀಡದ ಆಹಾರ ನಮಗೇಕೆ ಬೇಕೆಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಪ್ರಜ್ಞಾವಂತರೆಲ್ಲರೂ ವಿದ್ಯಾರ್ಥಿಗಳ ಧ್ವನಿಗೆ ಜೊತೆಯಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಯುವ ಮುನ್ನಡೆಯ ಸಂಘಟನೆಯಿಂದ ಆಕಾಶ್ ಮಂಗಳೂರು ಮಾತನಾಡಿದರು. ಸಂವಾದ ಸಂಸ್ಥೆಯ ನಿರ್ದೇಶಕಿ ಅನಿತಾ ರತ್ನಮ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕವಿ ಜನಾರ್ದನ ಕೆಸರಗದ್ದೆ, ಬದುಕು ಕಮ್ಯುನಿಟಿ ಕಾಲೇಜಿನ ಮೋರಳಿ ಮೋಹನ್ ಕಾಟಿ, ದೇವರಾಜ್ ಪಾಟೀಲ್, ರಮೇಶ್, ಹನುಮಂತ ಹಾಲಿಗೇರಿ, ಮಂಜು ಬಶೀರ್, ರಮೇಶ್ ಮತ್ತಿತರರಿದ್ದರು.

ದನದ ಮಾಂಸ ತಿಂದರೆ ಪಾಪ ಬರುತ್ತದೆ ಎನ್ನುವ ಮೂಲಕ ನಮ್ಮ ಜನರ ಆಹಾರದ ಹಕ್ಕನ್ನು ಕಸಿಯುತ್ತಿರುವ ಆರೆಸ್ಸೆಸ್ ಪ್ರೇರಿತ ಪಕ್ಷ ಇವತ್ತು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಪರಿಣಾಮವಾಗಿಯೆ ಜಗತ್ತಿನ ಅತಿ ಚಿಕ್ಕ ದೇಶಗಳಿಗೆ ಹೋಲಿಕೆ ಮಾಡಿದರೆ ಜಾಗತಿಕ ಆಹಾರದ ಬೆಳವಣಿಗೆಯಲ್ಲಿ ಭಾರತ ಅತ್ಯಂತ ಹಿಂದುಳಿದಿದೆ. ಇದು ಆಳುವ ಪ್ರಭುತ್ವಕ್ಕೆ ನಾಚಿಕೆ ತರಬೇಕಾದ ವಿಚಾರ. ಇಂಥವರಿಗೆ ಅಧಿಕಾರ ನೀಡಿದ ನಮ್ಮ ಜನರು ಕೂಡ ಸಂವಿಧಾನದ ಆಶಯಗಳನ್ನು ಮರೆತಂತೆ ವರ್ತಿಸುತ್ತಿದ್ದಾರೆ.

-ಮಾವಳ್ಳಿ ಶಂಕರ್, ಸಂಚಾಲಕ, ದಸಂಸ

ಜನ ಪ್ರಾದೇಶಿಕ ರೂಢಿಯಾಗಿ ಮಾಂಸ, ಸಸ್ಯ ಆಹಾರ ಬಳಸುತ್ತಿದ್ದಾರೆ. ಇದು ಸರಿಯಾಗಿಯೇ ಇದೆ. ಅದನ್ನು ತಿನ್ನಬಾರದು, ಇದನ್ನು ತಿನ್ನಬಾರದು ಎನ್ನುವ ಮೂಲಕ ಏಕ ಆಹಾರ ಪದ್ಧತಿಗೆ ದೂಡುವ ಹಕ್ಕು ಯಾರಿಗೂ ಇಲ್ಲ. ಇದನ್ನು ನಮ್ಮನ್ನಾಳುತ್ತಿರುವ ಪ್ರಭುತ್ವ ಅರ್ಥ ಮಾಡಿಕೊಂಡರೆ ಒಳಿತು.

-ಕೋಡಿಹಳ್ಳಿ ಚಂದ್ರಶೇಖರ್, ರೈತ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News